ಚಿಕ್ಕಮಗಳೂರು : ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ ಆಚರಣೆ…

205
firstsuddi

ಚಿಕ್ಕಮಗಳೂರು : ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂದು ನಗರದಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿರುವ ವಿಶ್ವೇಶ್ವರಯ್ಯನವರ ಪುತ್ಥಳಿಗೆ ಬೆಳಿಗ್ಗೆ ಮಾಲಾರ್ಪಣೆ ಮಾಡಿ ಸಾಮೂಹಿಕವಾಗಿ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಇಲಾಖೆಯ ಕಾರ್ಯಪಾಲಕ ಅಭಿಯಂತ ಎಂ.ಆರ್.ರಾಜೇಶ್ ಸರ್.ಎಂ.ವಿಶ್ವೇಶ್ವರಯ್ಯನವರು ದೇಶ ಕಂಡ ಮುತ್ಸದ್ದಿ ಮತ್ತು ಅಧ್ಬುತ ಪ್ರತಿಭೆ ಎಂದರು.
ವಿಶ್ವೇಶ್ವರಯ್ಯನವರು ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದರು, ಸರ್ಕಾರಿ ಸೇವೆಯನ್ನು ಅವರು ಎಂದೂ ದುರುಪಯೋಗ ಪಡಿಸಿಕೊಳ್ಳಲಿಲ್ಲ ಎಂದ ಅವರು ಇಂದಿನ ಇಂಜಿನಿಯರ್‍ಗಳು ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ದೇಶ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಕಾರ್ಯಪಾಲಕ ಅಭಿಯಂತ ಶಿವಪ್ರಕಾಶ್ ಮಾತನಾಡಿ ವಿಶ್ವೇಶ್ವರಯ್ಯನವರು ಪ್ರಾಮಾಣಿಕತೆಗೆ ಮತ್ತು ನಿಷ್ಠೆಗೆ ಇನ್ನೊಂದು ಹೆಸರಾಗಿದ್ದು, ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರಾದ ಸಂತೋಷ್, ರವಿ, ಶಶಿಧರ್, ಜಿಲ್ಲಾ ಪಂಚಾಯಿತಿ ನಿವೃತ್ತ ಸಹ ಕಾರ್ಯದರ್ಶಿ ಹೆಚ್.ಎಂ.ಗಂಗಾಧರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತ ಮಲ್ಲಿಕಾರ್ಜುನ್ ಹಾಜರಿದ್ದರು.