ಕಾರವಾರ : ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ತೀರ ಪ್ರದೇಶದಲ್ಲಿ ನಡೆದಿದೆ. ಮಂಡ್ಯ ಮೂಲದ ಉಲ್ಲಾಸ್(15) ಹಾಗೂ ಮೈಸೂರು ಮೂಲದ ಸುಹಾಸ್(17) ನೀರು ಪಾಲಾದ ಬಾಲಕರು ಎಂದು ಗುರುತಿಸಲಾಗಿದೆ. ಮೈಸೂರಿನಿಂದ 8 ಮಂದಿ ಪ್ರವಾಸಕ್ಕೆಂದು ಗೋಕರ್ಣಕ್ಕೆ ತೆರಳಿದ್ದರು. ಈ ವೇಳೆ ಇವರು ಇಂದು ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದರು. ಇಂದು ಅಮಾವಾಸ್ಯೆಯಾದ್ದರಿಂದ ಸಮುದ್ರ ಅಲೆಗಳ ಸೆಳೆತ ಹೆಚ್ಚಿರುತ್ತದೆ ಸಮುದ್ರಕ್ಕೆ ಇಳಿಯಬೇಡಿ ಎಂದು ಸ್ಥಳೀಯರು ಪ್ರವಾಸಿಗರಿಗೆ ತಿಳಿಸಿದ್ದರು. ಆದರೆ ಸ್ಥಳಿಯರ ಮಾತಿಗೆ ಕಿವಿಗೊಡದ ಬಾಲಕರು ಸಮುದ್ರಕ್ಕೆ ಇಳಿದಿದ್ದು, ಅಲೆಗಳ ಸೆಳೆತಕ್ಕೆ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕರನ್ನು ರಕ್ಷಣೆ ಮಾಡಲು ಮುಂದಾದ ಸ್ಥಳೀಯರು ಸುಹಾಸ್ ಎಂಬ ಬಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯ ಮೃತಪಟ್ಟಿದ್ದು, ಉಲ್ಲಾಸ್ ಎಂಬ ಬಾಲಕ ನೀರು ಪಾಲಾಗಿದ್ದು, ಯುವಕನ ಶವಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










