ಮೂಡಿಗೆರೆ : ತಾಲೂಕಿನಲ್ಲಿಯೇ ಕೋವಿಡ್19 ಚಿಕಿತ್ಸಾ ಕೇಂದ್ರ ತೆರೆಯಲು ಚಿಂತನೆ : ಎಂ.ಕೆ.ಪ್ರಾಣೇಶ್.

426
firstsuddi

ಮೂಡಿಗೆರೆ: ತಾಲೂಕಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಿರುವುದರಿಂದ ಸೋಂಕಿತರಿಗೆ ಹಾಗು ಕುಟುಂಬದವರಿಗೆ ತೊಂದರೆ ಉಂಟಾಗುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿಯೇ ಕೋವಿಡ್-19 ಚಿಕಿತ್ಸಾ ಕೇಂದ್ರ ತೆರೆಯುವ ಬಗ್ಗೆ ಹಲವು ಬೇಡಿಕೆಗಳು ಕೇಳಿಬಂದಿದ್ದು, ಈ ವಿಷಯವಾಗಿ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಾಲೂಕಿನಲ್ಲಿ 300ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ತಾಲೂಕಿಲ್ಲಿರುವ ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳುವಂತಾಗಿದೆ. ಅಲ್ಲದೇ ಕೆಲ ರೋಗಿಗಳು ಜಿಲ್ಲಾ ಕೇಂದ್ರಕ್ಕೆ ತೆರಳಲು ಹೆದರುತ್ತಿರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಸೋಂಕಿತರ ಕುಟುಂಬದ ಸದಸ್ಯರಿಗೆ ಹಾಗೂ ಅಕ್ಕ ಪಕ್ಕದ ಮನೆಯವರಿಗೆ ಸೋಂಕು ಹರಡುವ ಭೀತಿ ಉಂಟಾಗಿದೆ. ತಾಲೂಕಿನಲ್ಲಿ ಕೋವಿಡ್-19 ಚಿಕಿತ್ಸಾ ಕೇಂದ್ರ ತೆರೆದರೆ ಸೋಂಕಿತರು ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗುತ್ತಾರೆ. ಇದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ನೂರು ಹಾಸಿಗೆಯಿದೆ. ಇಲ್ಲಿ ಕೋವಿಡ್-19 ಆಸ್ಪತ್ರೆ ತೆರೆಯಲು ತಾಲೂಕಿನ ಜನತೆಯ ಆಗ್ರಹವಾಗಿದೆ. ಹಾಗಾಗಿ ಈಗಾಗಲೇ ಕೋವಿಡ್ ಚಿಕಿತ್ಸಾ ಕೇಂದ್ರ ತೆರೆಯಲು ಚಿಂತಿಸಲಾಗಿದೆ. ಅಲ್ಲದೇ ಬಿದರಹಳ್ಳಿ ವಸತಿ ನಿಲಯದಲ್ಲಿ ಕೂಡ ಚಿಕಿತ್ಸಾ ಕೇಂದ್ರ ತೆರೆಯಲು ಎಲ್ಲಾ ರೀತಿಯ ಸೌಲಭ್ಯವಿದೆ. ಜನರ ಅನುಕೂಲ ಹಾಗೂ ಸೋಂಕು ಹರಡದಂತೆ ತಡೆಗಟ್ಟಲು ತಾಲೂಕಿನಲ್ಲಿ ಕೋವಿಡ್-19 ಚಿಕಿತ್ಸಾ ಕೇಂದ್ರ ತೆರೆಯುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.