ಹಾವೇರಿ : ನದಿಯಲ್ಲಿ ಮರಳು ತುಂಬಲು ಹೋಗಿದ್ದ ಇಬ್ಬರು ಯುವಕರು ಎತ್ತಿನ ಗಾಡಿ ಸಹಿತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಬಳಿ ನಡೆದಿದೆ. ಜಗದೀಶ ವೆಂಕಪ್ಪ(23) ಹಾಗೂ ಬೆಟ್ಟಪ್ಪ ಮೋಹನ್ ಮುಳ್ಳಿನ(25) ನೀರು ಪಾಲಾದ ಯುವಕರು. ಯುವಕರು ಕೋಣನತಂಬಿಗಿ-ನಿಟ್ಟೂರು ಕ್ರಾಸ್ ಗ್ರಾಮದ ತುಂಗಾಭದ್ರಾ ನದಿ ನೀರಿನಲ್ಲಿ ಮರಳು ತುಂಬಲು ಹೋಗಿದ್ದು, ನೀರಿನ ಸೆಳೆತ ಹೆಚ್ಚಿದ್ದರಿಂದ ಎರಡು ಎತ್ತುಗಳ ಸಹಿತ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಯುವಕರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಕುರಿತು ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










