ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಸ್ವಾಂತಂತ್ರ್ಯ ಪೂರ್ವದಿಂದಲೂ ಇಲ್ಲಿವರೆಗೆ ನಮ್ಮ ದೇಶದ ಮಕ್ಕಳ ಅಪೌಷ್ಠಿಕತೆಯನ್ನ ತೊಡೆದು ಹಾಕಲು ಸಾಧ್ಯವಾಗಿಲ್ಲ ಎಂದು ಹೊಸಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್ ಅಭಿಪ್ರಾಯಪಟ್ಟರು.
ಅವರು ಬಳ್ಳಾರಿ ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ಹಾಗೂ ಲಕ್ಷ್ಮೀ ನಾರಾಯಣಸ್ವಾಮಿಯ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಿದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎನ್.ಎಫ್.ಹೆಚ್.ಎಸ್ ಸರ್ವೇ ಪ್ರಕಾರ ನಮ್ಮ ದೇಶದಲ್ಲಿ ಜನನವಾಗುತ್ತಿರುವ ಮಕ್ಕಳಲ್ಲಿ ಶೇ.34 ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಆತಂಕಕಾರಿ ವಿಚಾರ. ಈಗ ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ ಜನರಲ್ಲಿ ಅಪೌಷ್ಠಿಕತೆಯ ಸಮಸ್ಯೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದೊಂದು ಚಳುವಳಿಯೋಪಾದಿಯಲ್ಲಿ ಜರುಗಬೇಕಾಗಿದೆ. ನಮ್ಮ ಇಲಾಖೆಯಲ್ಲಿ ಪೌಷ್ಠಿಕ ಪೂರಕ ಆಹಾರಗಳನ್ನು ಕೊಡಲಾಗುತ್ತಿದೆ. ಆದರೆ ಮನೆಯಲ್ಲಿಯೇ ಮಕ್ಕಳಿಗೆ ಸೂಕ್ತ ಪೌಷ್ಠಿಕ ಆಹಾರಗಳನ್ನು ಕೊಡಬೇಕಾಗಿದೆ ಎಂದರು. ಪೋಷಣ್ ಅಭಿಯಾನವು ದೇಶದಾದ್ಯಂತ ಜಾರಿಯಲ್ಲಿದ್ದು ಮಾನ್ಯ ಪ್ರಧಾನಮಂತ್ರಿಗಳು ಇದರ ವರದಿ ಪರಿಶೀಲನೆ ಮಾಡುತ್ತಾರೆ ಎಂದು ತಿಳಿಸಿದರು.
ಮರಿಯಮ್ಮನಹಳ್ಳಿ ಪ.ಪಂ.ನ ಮುಖ್ಯಾಧಿಕಾರಿ ಉದಯಸಿಂಗ್ ಮಾತನಾಡಿ. ಮಕ್ಕಳ ಪೋಷಣೆಗೆ ಮನೆಯಲ್ಲಿಯೇ ಉತ್ತಮ ಆಹಾರ ಕೊಡಬೇಕು. ಈ ಬಗ್ಗೆ ಪೋಷಕರಿಗೆ ನಿರಂತರ ಅರಿವು ಮೂಡಿಸಬೇಕು. ಇದರ ಅಂಗವಾಗಿ ಪ.ಪಂ.ವತಿಯಿಂದ ಯಾವುದೇ ರೀತಿಯ ಸಹಾಯವನ್ನು ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಪಡೆಯಬಹುದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಶಕ್ತಿ ಕೇಂದ್ರದ ಪೋಷಣ್ ಅಭಿಯಾನ ಬಳ್ಳಾರಿ ಜಿಲ್ಲಾ ಸಂಚಾಲಕಿ ಮಹೇಶ್ವರಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿಯೂ ಮಕ್ಕಳಿಗೆ ಆಹಾರದಲ್ಲಿ ತಾಜಾ ತರಕಾರಿ ಹಾಗೂ ಸೊಪ್ಪು ಬಳಕೆ ಮಾಡಲು ಕೈತೋಟಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾಗಪ್ಪ, ಸಂಚಾಲಕ ನೀಲಕಂಠಪ್ಪ, ಸಹಾಯಕ ಸಂಚಾಲಕ ರಾಘವೇಂದ್ರ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಹುಲಿಗೆಮ್ಮ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಮೇಲ್ವಿಚಾರಕಿ ಅಕ್ಷತಾ ಸ್ವಾಗತಿಸಿದರು. ಮೇಲ್ವಿಚಾರಕಿ ಅಂಬುಜಾ ಸೇರಿದಂತೆ ನೂರಾರು ಅಂಗನವಾಡಿ ಶಿಕ್ಷಕಿಯರು ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಆಕರ್ಷಕ ಲೋಗೋ : ಪೋಷಣ್ ಅಭಿಯಾನದ ಅಂಗವಾಗಿ ಉಮಾ, ವಸಂತ, ಲಕ್ಷ್ಮಿ, ಶಾಮಲ, ಪ್ರಮೀಳ, ಖಾದಿರುನ್ನೀಸಾ ಸೇರಿದಂತೆ ಹಲವಾರು ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಸಹಾಯಕರು ಸೇರಿ ಪೋಷಕಾಂಶಗಳನ್ನು ಒಳಗೊಂಡಿರುವ ವಿವಿಧ ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು, ಬೆಲ್ಲ, ಮೊಟ್ಟೆ ವಿವಿಧ ಬಗೆಗಳ ಹಸಿರು ಸೊಪ್ಪು, ವಿವಿಧ ತರಕಾರಿಗಳಿಂದ ಪೋಷಣ್ ಅಭಿಯಾನಾ ಐ.ಸಿ.ಡಿ.ಎಸ್. ಲೋಗೋವನ್ನು ವಿಶಾಲವಾದ ಕೋಣೆಯಲ್ಲಿ ಅಲಂಕರಿಸಿದ್ದು ತುಂಬಾ ಆಕರ್ಷಣೀಯ ಹಾಗೂ ವಿಶೇಷವಾಗಿತ್ತು.










