ಬೆಂಗಳೂರು : ಇಂದು ರಾಜ್ಯಾದ್ಯಂತ ರೈತರು ಭೂ ಸುಧಾರಣಾ ಹಾಗೂ ಖಾಯ್ದೆ ತಿದ್ದುಪಡಿ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕ ಬಂದ್‍ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಖಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಹಸಿರು ಸೇನೆ, ದಲಿತ ಸಂಘಟನೆಗಳು, ಕರವೇ ಸೇರಿದಂತೆ 33ಕ್ಕೂ ಹೆಚ್ಚು ಸಂಘಟನೆಗಳು ರೈತ ಸಂಘಟನೆಗಳ ಪ್ರತಿಭಟನೆಗೆ ಕೈಜೋಡಿಸಿವೆ. ಬೆಂಗಳೂರು ನಗರ, ಮಂಡ್ಯ, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಗದಗ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಬೀದಿಗಿಳೀದು ಹೋರಾಟ ನಡೆಸುತ್ತಿವೆ. ಹಲವೆಡೆ ಬೈಕ್ ರ್ಯಾಲಿ, ಮೆರವಣಿಗೆ, ತಮಟೆ ಬಾರಿಸಿ ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ವಿಭಿನ್ನವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.










