ಹೊಸಪೇಟೆ : ಪರವಾನಿಗೆ ಪಡೆಯದೇ ಜಿಯೋ ಕೇಬಲ್ ಹಾಕಲು ತೆಗೆದ ಗುಂಡಿಯನ್ನು ಮುಚ್ಚಿಸಿದ ಗ್ರಾಮಸ್ಥರು…

107
firstsuddi

ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ

ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಪ.ಪಂ. ಕಾರ್ಯ ನಿರ್ವಹಿಸುತ್ತಿದ್ದರೂ, ಅದನ್ನು ಕಡೆಗಣಿಸಿ ಅದರ ಪರವಾನಿಗೆ ಪಡೆಯದೇ ಎಲ್ಲೆಂದರಲ್ಲಿ ಜಿಯೋ ಕೇಬಲ್ ನೆಟ್‍ವರ್ಕ್‍ನ ಕೇಬಲ್ ಹಾಕಲು ಕುಣಿ ತೋಡುವ ಕೆಲಸ ನಡೆದಿದ್ದು, ಸ್ಥಳೀಯರ ವಿರೋಧದ ನಡುವೆ ಅಗೆದ ಗುಂಡಿಗಳನ್ನು ಮುಚ್ಚಿ ವಾಪಸ್ ಹೋಗಿದ್ದಾರೆ.

ಮರಿಯಮ್ಮನಹಳ್ಳಿಯ 4ನೇ ವಾರ್ಡಿನಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಬಸವೇಶ್ವರ ದೇವಸ್ಥಾನದ ಬಳಿಯ ಮುಖ್ಯ ರಸ್ತೆಗಳಲ್ಲಿ ಕೇಬಲ್ ಹಾಕಲು ಶಿವು ಎಂಬ ಮೇಸ್ತ್ರಿಯ ನೇತೃತ್ವದಲ್ಲಿ ನಾಲ್ಕೈದು ಕಾರ್ಮಿಕರು ಕುಣಿ ತೋಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಸ್ಥಳೀಯರಾದ ಜಿ.ಬಸಪ್ಪ, ಜಿ.ಭರತ್, ಜಿ. ವಿರೂಪಾಕ್ಷಿ, ಎಲಿಗಾರ್ ಮಂಜುನಾಥ ಎಂ.ರಾಮಾಂಜಿನೇಯ ಮುಂತಾದವರು ಪ್ರಶ್ನಿಸಿದ್ದಾರೆ. ಈ ವೇಳೆ ಪ.ಪಂ.ನ ಯಾವುದೇ ಅನುಮತಿ ಪಡೆಯದೇ ಗುಂಡಿ ಅಗೆಯುತ್ತಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಕೆಲಸ ಕೈಬಿಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಂತರ ಎಚ್ಚೆತ್ತ ಕಾರ್ಮಿಕರು ಕೂಡಲೇ ಕೆಲಸ ನಿಲ್ಲಿಸಿ ಅಗೆದ ಗುಂಡಿಗಳನ್ನು ಮುಚ್ಚಿ ಹೋಗಿದ್ದಾರೆ.
ಈ ಬಗ್ಗೆ ಮರಿಯಮ್ಮನಹಳ್ಳಿ ಪ.ಪಂ.ನ ಮುಖ್ಯಾಧಿಕಾರಿ ಉದಯ ಸಿಂಗ್‍ರನ್ನು ವಿಚಾರಿಸಿದಾಗ ಜಿಯೋ ನೆಟ್ ವರ್ಕ್ ಕೇಬಲ್ ಹಾಕಲು ಗುಂಡಿ ತೋಡುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಪ.ಪಂ.ನಿಂದ ಯಾರಿಗೂ ಪರವಾನಗಿಯನ್ನು ನೀಡಿಲ್ಲ. ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.