ರೈತ ವಿರೋಧಿ ನೀತಿ ವಿರುದ್ಧದ ರೈತರ ಹೋರಾಟಕ್ಕೆ ಮೂಡಿಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ…

399
firstsuddi

ಮೂಡಿಗೆರೆ : ಭೂ ಸುಧಾರಣಾ ಖಾಯ್ದೆ ಹಾಗೂ ಕೃಷಿ ಮಸೂದೆಯನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪಟ್ಟಣದ ಲಯನ್ಸ್ ವೃತ್ತದಲ್ಲಿ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಪ್ರವಾಸಿ ಮಂದಿರದಿಂದ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತ ವಿರೋಧಿ ನರೇಂದ್ರ ಮೋದಿ ಎಂದು ಘೋಷಣೆ ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅವರು, ಬಿಜೆಪಿ ಸರ್ಕಾರ 1971ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಅಂಗೀಕಾರ ಮಾಡುವ ಮೂಲಕ ರಾಜಕೀಯ ಪಕ್ಷಗಳ ವಿರೋಧದ ನಡುವೆ ಮನಬಂದಂತೆ ಎಪಿಎಮ್‍ಸಿ ಕಾಯ್ದೆಯನ್ನು ಜಾರಿಗೆ ತಂದು ಅನ್ನದಾತರ ಹೊಟ್ಟೆಗೆ ಹೊಡೆಯುತ್ತಿದ್ದಾರೆ. ಎಪಿಎಮ್‍ಸಿ ಕಾಯ್ದೆ ವರ್ತಕರು, ಹಣವಂತರು ಹಾಗೂ ಅಂಬಾನಿಯಂತವರಿಗೆ ಸಹಕಾರಿಯಾಗಿದ್ದು, ರೈತರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ.
ಕಾಗೋಡು ಚಳುವಳಿಯಲ್ಲಿ ಜೆ.ಹೆಚ್. ಪಾಟೀಲ್, ಕಾಗೋಡು ತಿಮ್ಮಪ್ಪ ಅವರಂತಹ ಹೋರಾಟಗಾರರು ಗೇಣಿದಾರರಿಗೆ “ಉಳುವವನೆ ಭೂಮಿಯ ಒಡೆಯ” ಎಂಬ ಕಾನೂನು ಹೋರಾಟದಿಂದ ಸಾವಿರಾರು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಂಡು ರೈತರ ಪರವಾಗಿ ಕೆಲಸ ಮಾಡಬೇಕು.
ಈ ಕಾಯ್ದೆ ಬಂಡವಾಳಶಾಹಿಗಳು ಭೂಮಿ ಕೊಳ್ಳಲು ಸಹಕಾರಿಯಾಗಿದೆ. ಕಾರ್ಮಿಕ, ರೈತ ಸಂಘ ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಧಂಗೆ ಏಳುವ ಮೊದಲು ಪ್ರಧಾನಿ ಮೋದಿ ಅವರು ಈ ಕಾಯ್ದೆಯನ್ನು ವಾಪಾಸ್ ಪಡೆಯಬೇಕು. ಭಾರತ ಶೇ. 75ರಷ್ಟು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಸರ್ಕಾರಗಳು ಅನ್ನದಾತರ ಪರವಾಗಿ ಇರಬೇಕು. ರೈತರ ಬಗ್ಗೆ ಕಾಳಜಿ ಇಲ್ಲದೆ ಮಾತನಾಡಲು ಬಾರದ ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿರುವುದು ಬೇಸರದ ಸಂಗತಿ ಎಂದರು.
ಭಾರತ ಸರ್ಕಾರ ಖಾಸಗಿ ಕಂಪನಿಗಳಿಗೆ ಎಲ್‍ಐಸಿ ಮುಂತಾದವುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು, ದೇಶವನ್ನು ಅಲ್ಲೋಲ ಕಲ್ಲೋಲ ಮಾಡಲು ಹೊರಟಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ನಿಷ್ಕ್ರಿಯಗೊಳಿಸಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದರು.
ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರು ನಿರುದ್ಯೋಗ ದಿನಾಚರಣೆಯನ್ನಾಗಿ ಆಚರಣೆ ಮಾಡಲು ಹೊರಟಿರುವುದು ನರೇಂದ್ರ ಮೋದಿ ಅವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮುಂದಿನ ದಿನಗಳಲ್ಲಾದರು ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನ ಕೆಲಸದಲ್ಲಿ ತೊಡಗಿಸಿಕೊಂಡು ದೇಶದಲ್ಲಿ ಯುವಕರನ್ನು ನಿರುದ್ಯೋಗ ಸಮಸ್ಯೆಯಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ ಝಾಕಿರ್ ಹುಸೇನ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜೀತ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಹೇಮಶೇಖರ್, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷರಾದ ಅಭಿಜಿತ್ ಮಗ್ಗಲಮಕ್ಕಿ, ಸಿಪಿಐ ಮುಖಂಡರಾದ ರಮೇಶ್ ದೇವೃಂದ, ಪ್ರಸನ್ನ ಮರುಗುಂದ, ರತನ್ ಊರುಬಗೆ, ಬಕ್ಕಿ ಮಂಜುನಾಥ್ ಅವರು ಸೇರಿದಂತೆ ಇತರರು ಇದ್ದರು.