ಬೆಂಗಳೂರು : ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗುತ್ತದೋ, ಇಲ್ಲವೋ ಎಂಬ ಗೊಂದಲಕ್ಕೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಸದ್ಯ ಶಾಲಾ-ಕಾಲೇಜು ಆರಂಭಿಸುವ ಯಾವುದೇ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಪೋಷಕರೂ ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸುವ ಒಲವು ತೋರಿಸುತ್ತಿಲ್ಲ. ಮಕ್ಕಳ ಆರೋಗ್ಯ ದೃಷ್ಠಿಯಿಂದ ಸದ್ಯ ರಾಜ್ಯದಲ್ಲಿ ಶಾಲೆ ತೆರೆಯುವ ಯೋಚನೆಯಿಲ್ಲ. ಈ ಬಗ್ಗೆ ಪೋಷಕರಿಗೆ ಗೊಂದಲ ಬೇಡ. ಈ ಕುರಿತು ಎಲ್ಲಾ ಶಾಸಕರೊಂದಿಗೆ ಚರ್ಚೆ ಮಾಡುತ್ತೇವೆ. ಅದಾದ ಬಳಿಕವಷ್ಟೇ ಶಾಲಾ-ಕಾಲೇಜು ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರಿಗೂ ಈ ಕುರಿತು ಪತ್ರ ಬರೆದು ಸಲಹೆ ನೀಡಲು ಮನವಿ ಮಾಡಿದ್ದೇನೆ. ಅವರ ನಿಲುವು ಏನೆಂದು ತಿಳಿದುಕೊಂಡು ಬಳಿಕ ಶಾಲೆ ತೆರೆಯುವುದರ ಬಗ್ಗೆ ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಆರ್ ಟಿಇ ಹಣ ಬಿಡುಗಡೆ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದ ಹೇಳಿರುವ ಸುರೇಶ್ ಕುಮಾರ್ ಅವರು, ‘ನನ್ನ ಕೋರಿಕೆಯನ್ನು ಮನ್ನಿಸಿ ಕ್ಷಿಪ್ರವಾಗಿ ಆರ್.ಟಿ.ಇ ಹಣ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳಿಗೆ ವಂದನೆಗಳು. ಖಾಸಗಿ ಶಾಲಾ ಶಿಕ್ಷಕರ ಒಂದಷ್ಟು ಬವಣೆ ನೀಗುವಲ್ಲಿ ಇದು ಖಂಡಿತ ಸಹಕಾರಿಯಾಗಲಿದೆ. ಶಾಲೆಗಳು ಈ ಹಣವನ್ನು ಶಿಕ್ಷಕರ ವೇತನಕ್ಕೆ ಮೊದಲ ಆದ್ಯತೆಯಾಗಿ ಬಳಸಲು ಪ್ರಾಧಾನ್ಯತೆಯನ್ನು ನೀಡಬೇಕು ಎಂದು ಹೇಳಿದ್ದಾರೆ.










