ಬಣಕಲ್ : ಗೋರಕ್ಷಣೆಗೆ ಹಿಂದೂ ಸಮಾಜ ಸಂಕಲ್ಪ ಮಾಡಿದ್ದು ಅಕ್ರಮ ಗೋಸಾಗಾಟವನ್ನು ಹತ್ತಿಕ್ಕಲು ಪೋಲಿಸರು ಮುಂದಾಗದೇ ಇದ್ದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರೆ ಆ ಕಾರ್ಯ ಮಾಡಲಿದ್ದಾರೆ ಎಂದು ದಕ್ಷಿಣ ಪ್ರಾಂತ್ಯ ಸಹಸಂಚಾಲಕರಾದ ರಘು ಸಕಲೇಶಪುರ ಅವರು ಹೇಳಿದರು.
ವಿಶ್ವಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಬಣಕಲ್‍ನಲ್ಲಿ ನಡೆದ ಹಿಂದೂ ಜನಜಾಗೃತಿ ಅಭಿಯಾನ, ಬಣಕಲ್ ಚಲೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲದಿನಗಳ ಹಿಂದೆ ಬಣಕಲ್‍ನ ಹೋಟೆಲ್‍ವೊಂದರಲ್ಲಿ ಗೋಮಾಂಸದ ಖಾದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪ್ರಶ್ನಿಸಿದಾಗ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಾಗ ಬಣಕಲ್ ಪೋಲಿಸರು ಗೋ ಮಾಂಸದ ಖಾದ್ಯ ಮಾರಾಟ ಮಾಡುತ್ತಿದ್ದ ಹೋಟೆಲ್ ವಿರುದ್ದ ಕ್ರಮ ಕೈಗೊಳ್ಳದೇ ಬಜರಂಗದಳದ ಕಾರ್ಯಕರ್ತರ ವಿರುದ್ದ ಲಾಠಿ ಬೀಸಿದ್ದಾರೆ. ಏಕಪಕ್ಷೀಯವಾಗಿ ವರ್ತಿಸುವ ಬಣಕಲ್ ಪೋಲಿಸರ ಕ್ರಮ ಖಂಡನೀಯ. ಇಂತಹ ಪೋಲಿಸರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದರು.
ಬಣಕಲ್, ಕೊಟ್ಟಿಗೆಹಾರ ಭಾಗದಲ್ಲಿ ಗೋಕಳ್ಳತನದ ಪ್ರಕರಣಗಳು ಹೆಚ್ಚಿದೆ. ಕೆಲ ಅನ್ಯಕೋಮಿನ ವ್ಯಕ್ತಿಗಳು ತಮ್ಮ ತೋಟಗಳಲ್ಲಿ ಗೋವುಗಳನ್ನು ಕಡಿಯುತ್ತಿರುವ ಮಾಹಿತಿ ಇದೆ. ಪೋಲಿಸರು ಗೋಹತ್ಯೆಯಲ್ಲಿ ತೊಡಗಿರುವವರ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಬಜರಂಗದಳ ಸಹಸಂಚಾಲಕರಾದ ಅವಿನಾಶ್ ಮಾತನಾಡಿ ಬಣಕಲ್‍ನಲ್ಲಿ ಗೋಮಾಂಸದ ಖಾಧ್ಯ ಮಾರುತ್ತಿದ್ದ ಹೋಟೆಲ್‍ನ ಮಾಲೀಕ ಕಳೆದ 17 ವರ್ಷದಿಂದ ಗೋಮಾಂಸದ ಖಾಧ್ಯ ಮಾರುತ್ತಿದ್ದೇನೆ ಎಂದು ಹೇಳುತ್ತಾನೆ. ಅವರಿಗೆ ಗೋಮಾಂಸ ಮಾರಲು ಅನುಮತಿ ನೀಡಿದವರು ಯಾರು?. ಹೋಟೆಲ್‍ಗೆ ವ್ಯಾಪಾರ ಪರವಾನಗಿ ಹೇಗೆ ನೀಡಲಾಯಿತು? ಎಂದು ಪ್ರಶ್ನಿಸಿದರು. ಗೋಮಾಂಸದ ಖಾಧ್ಯ ಮಾರುತ್ತಿರುವ ಬಗ್ಗೆ ಹೋಟೆಲ್‍ನ ಮಾಲೀಕರೆ ಹೇಳಿದರೂ ಪೋಲಿಸರು ಅವರ ವಿರುದ್ದ ಕ್ರಮ ಕೈಗೊಳ್ಳದೆ ಬಜರಂಗದಳದ ಕಾರ್ಯಕರ್ತರಿಗೆ ಲಾಠಿ ಬೀಸಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಬಜರಂಗದಳ ತಾಲ್ಲೂಕು ಸಂಚಾಲಕ ವಿನಯ್‍ಶೆಟ್ಟಿ, ಬಣಕಲ್ ಹೋಬಳಿ ಸಂಚಾಲಕ ಅಭಿಷೇಕ್, ತಾಲ್ಲೂಕು ಗೋರಕ್ಷಾ ಪ್ರಮುಖ್ ದೀಕ್ಷಿತ್, ತಾಲ್ಲೂಕು ಸತ್ಸಂಗ ಪ್ರಮುಖ್ ಚಿರಾಗ್, ಸಂಘ ಪರಿವಾರದ ಮುಖಂಡರಾದ ಸಂಜಯಗೌಡ ಕೊಟ್ಟಿಗೆಹಾರ, ಬಿ.ಎಂ ಭರತ್, ರಘುಪತಿ ಬಾಳೂರು, ಅಭಿಲಾಷ್, ಪ್ರವೀಣ್‍ಪೂಜಾರಿ, ಚಿರಾಗ್, ವಿನೋದ್ ಕಣಚೂರು, ಕೆಸಿ.ರತನ್, ಮುಂತಾದವರು ಇದ್ದರು.










