ಕಸ್ತೂರಿರಂಗನ್ ವರದಿ ಕೃಷಿಕರಿಗೆ ಮಾರಕ: ಬಿ.ಎಸ್ ನಾರಾಯಣಗೌಡ

232

ಕೊಟ್ಟಿಗೆಹಾರ:ಕಸ್ತೂರಿ ರಂಗನ್ ವರದಿ ಕೃಷಿಕರಿಗೆ ಮಾರಕವಾಗಿದ್ದು ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಜಾರಿ ಮಾಡಬಾರದು ಎಂದು ಹೆಗ್ಗುಡ್ಲು ಗ್ರಾಮದ ಕೃಷಿಕರಾದ ಬಿ.ಎಸ್ ನಾರಾಯಣಗೌಡ ಹೇಳಿದರು.
ಹೆಗ್ಗುಡ್ಲು ಗ್ರಾಮದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕಾಫಿ, ಮೆಣಸು, ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಸಂಭವವಿದ್ದು ಕೂಲಿ ಕಾರ್ಮಿಕರು ಕೂಡ ಗ್ರಾಮವನ್ನು ತೊರೆದು ಉದ್ಯೋಗವನ್ನು ಅರಸಿ ಪಟ್ಟಣವನ್ನು ಸೇರಬೇಕಾಧ ಅನಿವಾರ್ಯತೆ ಉಂಟಾಗುತ್ತದೆ. ಗ್ರಾಮದಲ್ಲಿ ಗ್ರಾಮಸ್ಥರ ಉಪಯೋಗಕ್ಕಾಗಿ ಮೀಸಲಿಟ್ಟಿದ್ದ ಕಂದಾಯ ಇಲಾಖೆಗೆ ಸೇರಿದ ಭೂಮಿ ಸರ್ವೆ ನಂ 169, 118,35,37 ರಲ್ಲಿನ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಅಕ್ರಮವಾಗಿ ವಶಪಡಿಸಿಕೊಂಡಿದ್ದು ಇದರಿಂದಾಗಿ ಗ್ರಾಮಸ್ಥರಿಗೆ ಸೌದೆ, ಸೊಪ್ಪು, ತರಲು ಜಾನುವಾರುಗಳನ್ನು ಮೇಯಿಸಲು ಅವಕಾಶ ಇಲ್ಲದಂತಾಗಿದೆ. ಇದರಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಗಿದೆ. ಪರಿಸ್ಥಿತಿ ಹೀಗಿರುವಾಗ ಕಸ್ತೂರಿರಂಗನ್ ವರದಿ ಜಾರಿಯಾದಲ್ಲಿ ಗ್ರಾಮಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಇರುವುದಿಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಕಸ್ತೂರಿರಂಗನ್ ವರದಿ ವಿರೋಧಿಸಿ ಗ್ರಾಮಸ್ಥರ ಸಹಿ ಇರುವ ಮನವಿ ಪತ್ರವನ್ನು ಕಳಿಸಲಾಗಿದೆ ಎಂದರು.
ಕೃಷಿಕರಾದ ಬಣಕಲ್‍ನ ಬಿ ರಮೇಶ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿಗರ ಜೀವನಕ್ಕೆ ತೊಂದರೆ ಆಗಲಿದೆ. ಸರ್ಕಾರ ಮಲೆನಾಡಿಗೆ ತೂಗುಗತ್ತಿಯಂತಿರುವ ಕಸ್ತೂರಿ ರಂಗನ್ ವರದಿವನ್ನು ಜಾರಿ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಕೃಷಿಕರಾದ ಬಿ.ಕೆ ನಾಗರಾಜ್ ಬಸನಿ, ಬಿ.ಕೆ ಪುಷ್ಪ, ತಾರಾನಾಥ್ ಹೆಗ್ಗುಡ್ಲು, ಎಚ್.ಬಿ ಸುದೀರ್ ಹೆಗ್ಗುಡ್ಲು, ಸುಂದರೇಶ್ ಕುಂದೂರು, ಬಿ.ಎಸ್ ಸುಧಾಕರ್ ಬಸನಿ, ಮಂಜುನಾಥ್ ಹೆಗ್ಗುಡ್ಲು, ಮೇಘರಾಜ್, ಸಂಭ್ರಮ್‍ಮಹೇಶ್, ವಿಜೇಂದ್ರ ಕುಂದೂರು, ಶ್ರೀಕಂಠೆಗೌಡ, ಸುಮಿತ್ರೆಗೌಡ, ಸುರೇಶ್‍ಗೌಡ ಮೊದಲಾದವರು ಇದ್ದರು.