ಮೈಸೂರು : ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ನಾನೇ 5 ವರ್ಷ ಮುಖ್ಯಮಂತ್ರಿಯಾಗುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ 2018ರಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಮೈತ್ರಿ ಸರ್ಕಾರ ರಚನೆ ಮಾಡಲಿಲ್ಲ. ಅವರ ಕೈಯಲ್ಲಿ ಅಧಿಕಾರವಿರಬೇಕು ಎಂದು ಮೈತ್ರಿ ಸರ್ಕಾರ ರಚನೆ ಮಾಡಿದರು. ನಾನು 12 ವರ್ಷದಲ್ಲಿ ಪಡೆದ ಒಳ್ಳೆಯತನವನ್ನು ಸರ್ವನಾಶ ಮಾಡಿದ್ದೆ ಸಿದ್ದರಾಮಯ್ಯ ಅವರ ಗುಂಪು. ದೇವೇಗೌಡ ಅವರ ಎಮೋಷನಲ್ ಗೆ ನಾನು ಟ್ರ್ಯಾಪ್ ಆದರೆ. ದೇವೇಗೌಡ ಅವರ ಒಳ್ಳೆಯತನವನ್ನು ಕಾಂಗ್ರೆಸ್ ಪಕ್ಷ ದುರುಪಯೋಗಪಡಿಸಿಕೊಂಡಿತು. ಬಿಜೆಪಿಯವರೊಂದಿಗೆ ಸರ್ಕಾರ ಮಾಡಿದ್ದರೆ ಐದು ವರ್ಷ ನಮ್ಮದೇ ಸರ್ಕಾರ ಇರುತ್ತಿತ್ತು. ನನಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೂ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆ. ಆದರೂ ಮೈತ್ರಿ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದೆ. ನಾನು ಮಾಡಿದ ಉತ್ತಮ ಕೆಲಸಗಳು ಜನರಿಗೆ ತಲುಪಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.










