ಕೊಟ್ಟಿಗೆಹಾರ : ತರುವೆ ಗ್ರಾ.ಪಂ ವ್ಯಾಪ್ತಿಯ ಅತ್ತಿಗೆರೆಯಲ್ಲಿ ಹೆಚ್ಚಿನ ಹಬ್ಬ ಅಥವಾ ಹೊಸಕ್ಕಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಮಡಿಯಾಗಿ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ಕುಯ್ದು ಹೊತ್ತು ತಂದು ಭತ್ತವನ್ನು ಕುಟ್ಟಲಾಯಿತು. ನಂತರ ಭತ್ತದ ಕುಟ್ಟಿದ ತೆಗೆದ ಅಕ್ಕಿಗೆ ಅವಲಕ್ಕಿಯನ್ನು ಬೆರೆಸಿ ಸಿಹಿ ತಯಾರಿಸಿ ಅತ್ತಿಗೆರೆಯ ಸೋಮೇಶ್ವರ ಹಾಗೂ ದೇವಿರಮ್ಮ ದೇವರಿಗೆ ನೈವೈದ್ಯ ಅರ್ಪಿಸಲಾಯಿತು.
ಹೆಚ್ಚಿನ ಹಬ್ಬದ ಪ್ರಯುಕ್ತ ಈಶ್ವರ ಹಾಗೂ ಸೋಮೇಶ್ವರ, ದೇವಿರಮ್ಮ ದೇವಸ್ಥಾನದಲ್ಲಿ ಪುಷ್ಪಾಲಂಕಾರ ಮಾಡಿ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಹೆಚ್ಚಿನ ಹಬ್ಬದ ಮೂಲಕ ವರ್ಷದಲ್ಲಿ ಬೆಳೆದ ಮೊದಲ ಫಸಲನ್ನು ನೈವೈದ್ಯ ಮಾಡಿ ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ.
ಈ ಸಂದರ್ಭದಲ್ಲಿ ಅರ್ಚಕರಾದ ಹರೀಶ್ ಭಟ್, ಅತ್ತಿಗೆರೆ ಗ್ರಾಮಸ್ಥರಾದ ನಾಗೇಶಗೌಡ, ಪೂರ್ಣೇಶ್, ಸೋಮೇಶ್, ಸಂತೋಷ್ ಮುಂತಾದವರು ಇದ್ದರು.










