ಕೊಟ್ಟಿಗೆಹಾರ : ಒಂದು ರೂಪಾಯಿ ಹಣ ಖರ್ಚು ಮಾಡದೇ ಬರಿಗಾಲಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡಿದ್ದ ನಿಡುವಾಳೆ ಕ್ಷೇತ್ರದ ಅಭ್ಯರ್ಥಿ ನವೀನ್ ಹಾವಳಿ ಅವರಿಗೆ ಮೂಡಿಗೆರೆ ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನವೀನ್ ಹಾವಳಿ ಅವರು, ಹಣಬಲ ಇಲ್ಲದೆಯೆ ಗೆಲುವು ಸಾಧಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ. ನಾನು ಮತದಾರರಲ್ಲಿ ಪ್ರಾಮಾಣಿಕವಾಗಿ ಮತಯಾಚನೆ ಮಾಡಿದ್ದೆ. ಹಣ ಹೆಂಡದ ಆಮಿಷ ಒಡ್ಡದೆ ಮತಯಾಚನೆ ಮಾಡಿದ್ದೆ. ಮತದಾರರು ನನ್ನ ಕೈಬಿಡಲಿಲ್ಲ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಮಾತನಾಡಿ ನವೀನ್ ಹಾವಳಿ ಅವರು ಮಾದರಿ ಅಭ್ಯರ್ಥಿಯಾಗಿ ಹಣ ಹಂಚದೇ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಮಾದರಿಯಾಗಿದ್ದಾರೆ ಎಂದರು.
ನವೀನ್ ಹಾವಳಿ ಅವರ ಗೆಲುವಿಗೆ ಹಲವರು ಅಭಿನಂದನೆ ತಿಳಿಸಿದ್ದು, ಕೆಲವರು ಮನೆಗೆ ಭೇಟಿ ನೀಡಿ ಅಭಿನಂದನೆ ತಿಳಿಸಿದ್ದರೆ ಮತ್ತೆ ಕೆಲವರು ಮೊಬೈಲ್ ಮೂಲಕ ಅಭಿನಂದಿಸಿದ್ದಾರೆ.










