ಮೂಡಿಗೆರೆ :ಇಂದಿನಿಂದ ಶಾಲೆ ಆರಂಭ-ವಿದ್ಯಾರ್ಥಿಗಳನ್ನು ವಿಶೇಷವಾಗಿ ಬರಮಾಡಿಕೊಂಡ ಶಿಕ್ಷಕರು…

282
firstsuddi

ಕೊಟ್ಟಿಗೆಹಾರ : ಮಹಾಮಾರಿ ಕೊರೊನಾ ಭೀತಿಯಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜು ಇಂದಿನಿಂದ ಶಾಲಾರಂಭಗೊಂಡಿದ್ದು, ಬಣಕಲ್‍ನ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ವಿಶೇಷವಾಗಿ ಬರಮಾಡಿಕೊಡಲಾಯಿತು.
ಬಣಕಲ್‍ನ ಶ್ರೀವಿದ್ಯಾಭಾರತಿ ಶಾಲೆಯಲ್ಲಿ ಹಿಂದಿನ ದಿನವೆ ಶಿಕ್ಷಕರರು ಶಾಲಾ ಆವರಣವನ್ನು ಶುಚಿಗೊಳಿಸಿದ್ದು, ತಳಿರುತೋರಣಗಳನ್ನು ಶಾಲೆಯ ಆವರಣದಲ್ಲಿ ಕಟ್ಟಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿದ್ದರು.
ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ಬರುತ್ತಿದ್ದಂತೆ ಶಿಕ್ಷಕರೆ ವಾದ್ಯವನ್ನು ಬಾರಿಸಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡರು. ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಬೆಳಿಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಲು ಶಾರದೆ ಮಾತೆಗೆ ಪೂಜೆ ಸಲ್ಲಿಸಿ ತರಗತಿ ಪ್ರವೇಶಿಸಿದರು.

ವಿದ್ಯಾರ್ಥಿಗಳು ಶಾಲೆ ಪ್ರವೇಶಿಸುತ್ತಿದ್ದಂತೆ ಸ್ಯಾನಿಟೈಸರ್ ನೀಡಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭ ಮಾಡಲಾಗಿದ್ದು, ವಾರದಲ್ಲಿ ಮೂರು ದಿನ ಪ್ರತಿ ತರಗತಿಗಳಿಗೆ ಪಾಠ ನಡೆಯಲಿದೆ. 

ಶಾಲೆ ಪ್ರಾರಂಭವಾದರೂ ವಿದ್ಯಾರ್ಥಿ ನಿಲಯಗಳು ತೆರೆಯದೆ ಇರುವುದರಿಂದ ವಿದ್ಯಾರ್ಥಿ ನಿಲಯಗಳಲ್ಲಿ ಉಳಿದುಕೊಂಡು ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಜಾವಳಿ, ಬಾಳೂರು, ಚೇಗು, ಮತ್ತಿಕಟ್ಟೆ ಸೇರಿದಂತೆ ದೂರದ ಊರುಗಳಿಂದ ಬಣಕಲ್‍ನ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ತೊಂದರೆಯಾಗಿದೆ. ದೂರದಿಂದ ಬರುವ ವಿದ್ಯಾರ್ಥಿಗಳು ಆಟೋ, ಜೀಪು ಮುಂತಾದ ಖಾಸಗಿ ಬಾಡಿಗೆ ವಾಹನ ಅಥವಾ ಬಸ್ಗಳನ್ನು ಅವಲಂಬಿಸಿ ಶಾಲೆಗೆ ಬರಬೇಕಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕರನ್ನು ಕೇಳಿದರೆ ವಿದ್ಯಾರ್ಥಿ ನಿಲಯ ತೆರೆದಿದ್ದು, ವಿದ್ಯಾರ್ಥಿಗಳು ಬರುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಶಾಲೆಗಳಿಗೆ ವಿದ್ಯಾರ್ಥಿ ನಿಲಯ ತೆರೆದಿರುವ ಬಗ್ಗೆ ಯಾವುದೇ ಮಾಹಿತಿ ನೀಡದೇ ಇರುವುದರಿಂದ ಗೊಂದಲ ಉಂಟಾಗಿದೆ. 

ತರಗತಿಗಳಲ್ಲಿ ಸುರಕ್ಷತಾ ಕ್ರಮ

ತರಗತಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದ್ದು, ತರಗತಿಯ ಪ್ರತಿ ಡೆಸ್ಕಿಗೆ ಇಬ್ಬರು ವಿದ್ಯಾರ್ಥಿಗಳಂತೆ ಅಂತರ ಕಾಪಾಡಿಕೊಳ್ಳಲಾಗಿದೆ. ಮದ್ಯಾಹ್ನಕ್ಕೆ ತರಗತಿಗಳು ಮುಗಿಯಲಿರುವುದರಿಂದ ಶಾಲೆಯಲ್ಲಿ ಬಿಸಿ ಊಟ ನೀಡುತ್ತಿಲ್ಲ. ಮನೆಯಿಂದ ವಿದ್ಯಾರ್ಥಿಗಳು ಊಟ ತಂದರೆ ಪರಸ್ಪರ ಊಟ ಹಂಚಿಕೊಳ್ಳದೆ ದೂರ ದೂರ ಕುಳಿತು ಊಟ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಲಾ ಸಮಿತಿ ಅಧ್ಯಕ್ಷ ಶಿವರಾಮಶೆಟ್ಟಿ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ಮೇಲೆ ಕಾಳಜಿ ಇಟ್ಟು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲಾರಂಂಭಕ್ಕೆ ಶಿಕ್ಷಕರು ಹಲವು ದಿನಗಳಿಂದ ಸಿದ್ದತೆ ನಡೆಸಿದ್ದು, ಶಾಲಾವರಣವನ್ನು ಸ್ವಚ್ಚಗೊಳಿಸಿ ತರಗತಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ತಿಳಿಸಿದರು.

ಬಣಕಲ್ ಫ್ರೌಡಶಾಲೆ, ಕೊಟ್ಟಿಗೆಹಾರ ಸರ್ಕಾರಿ ಪ್ರೌಡಶಾಲೆ, ಅತ್ತಿಗೆರೆ ಸಹಿಪ್ರಾ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲಾಯಿತು. ಕೊರೊನಾ ಹಿನ್ನಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಮತ್ತಿಕಟ್ಟೆಯ ಸಹಿಪ್ರಾ ಶಾಲೆಯಲ್ಲಿ ಶಾಲಾರಂಭ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಶಾಲೆಗೆ ಬಣ್ಣ ಬಳಿಯಲಾಗಿದ್ದು, ಮಕ್ಕಳಿಗೆ ಸಿಹಿ ಹಂಚಿ ಮಕ್ಕಳನ್ನು ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮತ್ತಿಕಟ್ಟೆ ಸಹಿಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಅವಿರತ ತಂಡದಿಂದ ನೋಟ್ ಬುಕ್‍ಗಳನ್ನು ವಿತರಿಸಲಾಯಿತು.