ಚಿಕ್ಕಮಗಳೂರು: 12ನೇ ಶತಮಾನದ ಬಸವಣ್ಣನವರ ವಚನಗಳು,ವಿಚಾರಧಾರೆಗಳು ಸಮಾಜಕ್ಕೆ ಅತ್ಯಗತ್ಯವಾಗಿವೆ:ಮಾಜಿ ಸಚಿವೆ ಡಿ.ಕೆ.ತಾರಾದೇವಿ.

267

ಚಿಕ್ಕಮಗಳೂರು:ಇಂದಿನ ಯುವಜನತೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿರುವುದು ಮತ್ತು ಟೀಕಿಸುತ್ತಿರುವುದು ನಮ್ಮ ವ್ಯವಸ್ಥೆಯ ಘೋರ ದುರಂತ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಜಿಲ್ಲಾ ಕಸಾಪ ನಗರದ ವಿರಕ್ತ ಮಠ ಬಸವ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ದಿ|| ಡಿ.ಎಸ್.ಕೃಷ್ಣಪ್ಪಗೌಡ ಮತ್ತು ದಿ|| ಎ.ಎಂ.ಬಸವೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಾಂಧೀ ಆರ್ಥಿಕ ಚಿಂತನೆ-ಸರ್ವೋದಯ ಸಮಾಜ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ರಾಷ್ಟ್ರಪಿತ ಜೀವಿಸಿದ್ದ 20ನೇ ಶತಮಾನವನ್ನು ಇಡೀ ವಿಶ್ವವೇ ಗಾಂಧೀಯುಗ ಎಂದು ಕರೆಯುತ್ತದೆ, ಜಗತ್ತಿನಲ್ಲಿ ಕೋಟ್ಯಾಂತರ ಜನ ಒಂದೇ ವ್ಯಕ್ತಿಯನ್ನು ಗೌರವಿಸಿದ್ದರೆ ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಲಕ್ಷಾಂತರ ಬರಹ ಮತ್ತು ಪ್ರಕಟಣೆ ಕಂಡಿದ್ದರೆ, ವ್ಯಾಪಕವಾಗಿ ವಿಚಾರ ಸಂಕಿರಣಗಳು, ಚರ್ಚೆಗಳು ನಡೆದಿದ್ದರೆ ಅದು ಮಹಾತ್ಮಾ ಗಾಂಧೀಜಿಯವರ ಬಗ್ಗೆ ಮಾತ್ರ ಎಂದರು.
ಮಹಾತ್ಮಾ ಗಾಂಧೀಜಿಯವರನ್ನು ಕುವೆಂಪು, ಬೇಂದ್ರೆ, ವಿ.ಸಿ, ಚನ್ನವೀರಕಣವಿ ಸೇರಿದಂತೆ ಎಲ್ಲಾ ನವೋದಯ ಕವಿಗಳು ತಮ್ಮ ಬರಹಗಳಲ್ಲಿ ಕೊಂಡಾಡಿದ್ದಾರೆ, ಆದರೆ ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರಪಿತನನ್ನು ರ್ಯಾಸ್ಕಲ್, ಸ್ಕ್ರೌಂಡ್ರಲ್ ಎಂದು ಜರಿಯುತ್ತಿದ್ದಾರೆ ಎಂದು ವಿಷಾದಿಸಿದರು.
ನಾವು ರಾಷ್ಟ್ರಪಿತನನ್ನು ಮರೆತಿಲ್ಲ, ಆದರೆ ಅವರ ತತ್ವ ಸಿದ್ದಾಂತಗಳನ್ನು ಸಮಾಧಿ ಮಾಡಿದ್ದೇವೆ, ಎಲ್ಲಾ ರಸ್ತೆಗಳಿಗೂ ಅವರ ಹೆಸರಿಟ್ಟಿದ್ದೇವೆ ಆದರೆ ಅವರಂತೆ ಬದುಕುತ್ತಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ 12ನೇ ಶತಮಾನದ ಬಸವಣ್ಣನವರ ವಚನಗಳು, ವಿಚಾರಧಾರೆಗಳು ಸಾಮಾಜಿಕ ಬದಲಾವಣೆ ತಂದಂತವು ಎಂದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ತತ್ವ, ಸಿದ್ದಾಂತ ಮತ್ತು ವಿಚಾರಧಾರೆಗಳು ಭಕ್ತಿ ಭಂಡಾರಿ ಬಸವಣ್ಣನವರ ವಿಚಾರಧಾರೆಗಳು, ತತ್ವಗಳು ಒಂದೇ ಆಗಿವೆ, ಅವು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಸಮಾಜ-ಶರಣರ ಆರ್ಥಿಕ ಚಿಂತನೆಗಳು ವಿಷಯ ಕುರಿತು ಬಸವ ಮಂದಿರದ ಶ್ರೀ ಡಾ|| ಬಸವ ಮರುಳಸಿದ್ದ ಸ್ವಾಮೀಜಿ ಉಪನ್ಯಾಸ ನೀಡಿದರು, ಹಿರೇಗೌಜ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಕಲಾ ಬಳಗದಿಂದ ಗೀತಗಾಯನ ಮತ್ತು ಅಕ್ಕನ ಬಳಗದಿಂದ ವಚನ ಗಾಯನ ನಡೆಯಿತು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಿ.ಕೆ.ಉದಯಶಂಕರ್, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ, ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.