ಚಿಕ್ಕಮಗಳೂರು : ಜಾನಪದ ಜಗತ್ತಿನ ಎಲ್ಲಾ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಮೂಲ ಬೇರು: ಡಾ|| ಬೆಳವಾಡಿ ಮಂಜುನಾಥ್.

138
First Suddi

ಚಿಕ್ಕಮಗಳೂರು : ಜಾನಪದ ಜಗತ್ತಿನ ಎಲ್ಲಾ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಮೂಲ ಬೇರು ಎಂದು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಹೇಳಿದರು.
ಜಿಲ್ಲಾ ಕಸಾಪ ಹಿರೇಗೌಜದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಜೆ.ಪಿ.ಯಶೋಧಮ್ಮ ರಾಮೇಗೌಡ ಹಾಗೂ ಕೆ.ಎಸ್.ಕಲ್ಲೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಜನಪದ ಸಾಹಿತ್ಯದ ಪಾತ್ರ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಜಗತ್ತಿನ ಎಲ್ಲಾ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಹಿಂದೆ ಜಾನಪದವಿದೆ. ಜಾನಪದದಲ್ಲಿಲ್ಲದ ಕಲಾ ಪ್ರಾಕಾರಗಳು ಇಡೀ ಜಗತ್ತಿನಲ್ಲಿ ಯಾವುದೂ ಇಲ್ಲ. ಕಲೆ, ಸಾಹಿತ್ಯ, ಸಂಗೀತ, ಕಥೆ, ಲಾವಣಿ, ಒಗಟು, ಗಾದೆ ಸೇರಿದಂತೆ ಎಲ್ಲಾ ಪ್ರಾಕಾರಗಳೂ ಜಾನಪದದಲ್ಲಿವೆ ಎಂದರು.
ಜಾನಪದ ಕಥೆಗಳು ಸಂಸ್ಕಾರ ಸಂಸ್ಕøತಿಯನ್ನು ಕಟ್ಟಿಕೊಡುತ್ತವೆ, ಲಾವಣಿಗಳು ಐತಿಹಾಸಿಕ ದಾಖಲೆಗಳನ್ನು ಒದಗಿಸುತ್ತವೆ, ಒಗಟು, ಗಾದೆಗಳು ಬುದ್ದಿಶಕ್ತಿಯನ್ನು ಬೆಳೆಸುತ್ತವೆ, ಕಲೆ, ಸಾಹಿತ್ಯ ಸಂಸ್ಕøತಿ, ಸಂಪ್ರದಾಯಗಳನ್ನು ಜಾನಪದ ಆಯಾ ದೇಶ, ರಾಜ್ಯ, ಪ್ರಾಂತ್ಯಗಳಲ್ಲಿ ಅಲ್ಲಿನ ಆಡುಭಾಷೆಯಲ್ಲೇ ಕಟ್ಟಿಕೊಟ್ಟಿದೆ ಎಂದು ತಿಳಿಸಿದರು.
ಜಾನಪದ ಸಾಹಿತ್ಯದಲ್ಲಿ ಸ್ತ್ರೀ ಪ್ರಜ್ಞೆ ವಿಷಯ ಕುರಿತು ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ವೀರೇಶ್ ಕೌಲಗಿ ಜನರ ಜೀವನದೊಂದಿಗೆ ಬೆಸೆದುಕೊಂಡಿರುವ ಜಾನಪದ ಬಹಳಷ್ಟು ಮೌಲ್ಯಗಳನ್ನು ಸ್ತ್ರೀ ಕುಲಕ್ಕೆ ಕಟ್ಟಿಕೊಟ್ಟಿದೆ. ಸ್ತ್ರೀ ಸಂವೇದನೆ ಜಾನಪದದಲ್ಲಿ ಹಾಸುಹೊಕ್ಕಾಗಿದೆ, ಜಾನಪದ ಮತ್ತು ಸ್ತ್ರೀ ನಮ್ಮ ಮೂಲ ಬೇರುಗಳು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕøತಿಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸೇವೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎನ್.ಆನಂದಪ್ಪ ಮತ್ತು ಕನ್ನಡ ಭಾಷಾ ಶಿಕ್ಷಕ ವೀರೇಶ್ ಕೌಲಗಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶಿಕ್ಷಕರ ಬಳಗದಿಂದ ಗೀತಗಾಯನ ನಡೆಯಿತು.
ಇದೇ ವೇಳೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹೆಚ್.ಆರ್.ದೇವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದತ್ತಿದಾನಿ. ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್.ಶಿವಕುಮಾರ್, ಕಡೂರು ತಾಲ್ಲೂಕು ಕಸಾಪ ಅಧ್ಯಕ್ಷ ರವಿಪ್ರಕಾಶ್ ಹಿರಿಯ ಸದಸ್ಯ ಎಂ.ಸಿ.ಶಿವಾನಂದ ಸ್ವಾಮಿ, ರವೀಶ್ ಬಸಪ್ಪ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕರಾದ ಜ್ಞಾನಮೂರ್ತಿ ಸ್ವಾಗತಿಸಿದರು, ಲತಾ ವಂದಿಸಿದರು.