ಮರಿಯಮ್ಮನಹಳ್ಳಿ : ಗ್ರಾಮದ ಮತ್ತು ಊರಿನ ಗ್ರಾಮಸ್ಥರೆಲ್ಲರೂ ಚುನಾವಣಾ ಸಂದರ್ಭದಲ್ಲಿ ಮಾತ್ರ ಪಕ್ಷದ ಪರವಾಗಿ ರಾಜಕೀಯ ಮಾಡಬೇಕೆ ಹೊರತು ಚುನಾವಣೆಯ ನಂತರ ಪಕ್ಷಭೇದ ಮರೆತು ಒಗ್ಗಾಟ್ಟಾಗಿದ್ದಾಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹ.ಬೊ.ಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ ಅವರು ಹೇಳಿದರು.
ಅವರು ಸಮೀಪದ ಗುಂಡಾ ತಾಂಡದ ಗ್ರಾಮಸ್ಥರಿಗೆ ಅಕ್ರಮ ಸಕ್ರಮ ಪಟ್ಟಾ ವಿತರಣೆ ಹಾಗೂ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಹಲವೆಡೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸ್ವತಂತ್ರ ಬಂದು 73 ವರ್ಷಗಳ ಇತಿಹಾಸದಲ್ಲಿ ನಾಯಕರಹಟ್ಟಿ, ಗೊಲ್ಲರಹಟ್ಟಿ, ತಾಂಡಗಳು, ಭೋವಿಕಾಲೋನಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆಯಾಗಿದ್ದು ಇದೊಂದು ಐತಿಹಾಸಿಕ ತೀರ್ಮಾನವಾಗಿದೆ ಎಂದರು. ತಾಂಡಗಳು ಕಂದಾಯ ಗ್ರಾಮಗಳಾಗಲು ಮತ್ತು 94ಸಿ ಅಡಿಯಲ್ಲಿ ಪಟ್ಟ ಪಡೆಯಲು ನಮ್ಮ ಸಮಾಜದ ಮಾಜಿ ಸಚಿವ ಶಿವಮೂರ್ತಿ ನಾಯ್ಕ್‍ರ ಹೋರಾಟದ ಫಲವಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯ 11 ತಾಲೂಕುಗಳ 10 ವಿಧಾನಸಭಾ ಕ್ಷೇತ್ರದಲ್ಲಿ ಪಟ್ಟಣ ವಿತರಣೆಯಲ್ಲಿ ಯಾವುದೇ ತೊಂದರೆಯಿಲ್ಲದೇ ಸುಮಾರು 1500 ಗ್ರಾಮಗಳಿಗೆ ಪಟ್ಟಣ ವಿತರಣೆ ಮಾಡಲಾಯಿತು. ಆದರೆ ಗುಂಡಾ ತಾಂಡ ಗ್ರಾಮದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿಯಾಗಿದ್ದು, ತಾಂತ್ರಿಕ ತೊಂದರೆಯಿಂದಾಗಿ ಈವರೆಗೆ ಪಟ್ಟಾ ವಿತರಣೆ ಮಾಡಲು ಆಗಿರಲಿಲ್ಲ. ಚುನಾವಣಾ ಸಂದರ್ಭದಲ್ಲಿ ಶಾಸಕರು ಯಾವುದೋ ಕಾರಣದಿಂದ ಪಟ್ಟ ಕೊಡಲಿಲ್ಲ ಎಂದು ಅಪಪ್ರಚಾರವನ್ನು ಮಾಡಲಾಯಿತು ಎಂದರು. ಇಂದು ಗುಂಡಾ ತಾಂಡದ 86 ಹಾಗೂ ನಾಗಲಾಪುರ ತಾಂಡದ 2 ಕುಟುಂಬಗಳಿಗೆ ಪಟ್ಟಾವನ್ನು ವಿತರಿಸಲಾಗುತ್ತದೆ. ಇನ್ನು 162 ಪಟ್ಟಗಳನ್ನು ತಾಂತ್ರಿಕ ಸಮಸ್ಯೆಗಳಿಂದ ವಿತರಣೆ ಮಾಡಲಾಗುತ್ತಿಲ್ಲ, ಇನ್ನು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಇನ್ನುಳಿದ 162 ಪಟ್ಟಗಳ ವಿತರಣೆ ಮಾಡುವ ಕಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಳೆದ 2013 ರಿಂದ ಈಚೆಗೆ ನಾನು ಶಾಸಕನಾದ ಅಧಿಯಲ್ಲಿ ಗುಂಡಾ ತಾಂಡ ಗ್ರಾಮ ಒಂದರಲ್ಲೇ 1 ಕೋಟಿ ರೂಪಾಯಿಗಳ ಸಿ.ಸಿ.ರಸ್ತೆಯನ್ನು ನಿರ್ಮಿಸಲಾಗಿದೆ ಮತ್ತು ಕುಡಿಯುವ ನೀರಿಗಾಗಿ ಅನುದಾನವನ್ನು ನೀಡಲಾಗಿದೆ. ಎರಡನೇ ಹಂತದಲ್ಲಿ 70 ಕೋಟಿ ರೂ.ಗಳಷ್ಟು ಡಿ.ಎಂ.ಎಫ್ ಫಂಡ್‍ನಲ್ಲಿ ಬರುತ್ತದೆ ಇದರಲ್ಲಿ 50 ಕೋಟಿಯಷ್ಟು ಅನುದಾನವನ್ನು ಮರಿಯಮ್ಮಹಳ್ಳಿ ಹೋಬಳಿಗೆ ಮೀಸಲಿಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆ.ಪಿ.ಸಿ.ಸಿ. ಸದಸ್ಯ ಕುರಿ ಶಿವಮೂರ್ತಿ, ಮಾಜಿ ತಾ.ಪಂ.ಸದಸ್ಯ ಉಪ್ಪಾರ ಸೋಮಪ್ಪ, ಗ್ರಾಮದ ಮುಖಂಡ ಹೇಮ್ಲಾನಾಯ್ಕ ಮಾತನಾಡಿದರು. ಕಾರ್ಯಕ್ರಮದ ನಂತರ ನಬಾರ್ಡ್ ಮತ್ತು ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳ ಅಡಿಯ ಕಾಮಗಾರಿಗಳಾದ ಗುಂಡಾ ಗ್ರಾಮದ 2 ಶಾಲಾ ಕೊಠಡಿಗಳು, ಮರಿಯಮ್ಮನಹಳ್ಳಿ ಪಟ್ಟಣದ ಎ.ಕೆ.ಸಿ. ಸ.ಹಿ.ಪ್ರಾ ಶಾಲೆಯ 3 ಕೊಠಡಿಗಳು, ಗಣೇಶ್ ಜೈನ್ ಶಾಲೆಯ ಹತ್ತಿರದ 3 ಶಾಲಾ ಕೊಠಡಿಗಳು ಹಾಗೂ ಪಟ್ಟಣದ 2, 5, 7, 8, 9, 10, 15 ನೇ ವಾರ್ಡುಗಳಲ್ಲಿನ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಗಲಾಪುರ ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಮುಖಂಡರಾದ ಎನ್.ಸತ್ಯನಾರಾಯಣ, ಗೋವಿಂದರ ಪರಶುರಾಮ, ಯಮುನಾನಾಯ್ಕ, ತಿಮ್ಮಾನಾಯ್ಕ, ಕಾರುಬಾರಿ ಭೀಮಾನಾಯ್ಕ, ಪಕ್ಕೀರಪ್ಪ, ಭೀಮಣ್ಣ, ಎನ್.ಬುಡೇನ್ ಸಾಬ್, ಕೃಷ್ಣ, ಓಬಳೇಶ, ಇ.ಓ. ವಿಶ್ವನಾಥ, ಉಪತಹಶೀಲ್ದಾರ್ ಲಾವಣ್ಯ, ರವಿನಾಯ್ಕ, ಲೋಕೇಶ್, ಸಚ್ಚಿದಾನಂದ ಶೆಟ್ಟಿ, ಹುಸೇನ್ ಭಾಷ, ವೆಂಕಟೇಶ್ ನಾಯ್ಕ, ರೇಖ್ಯಾನಾಯ್ಕ, ರವಿಕುಮಾರ್ ಹಾಗೂ ಇತರರು ಇದ್ದರು.
Home ಸ್ಥಳಿಯ ಸುದ್ದಿ ಮರಿಯಮ್ಮನಹಳ್ಳಿ ಸಮೀಪದ ಗುಂಡಾ ತಾಂಡದಲ್ಲಿ 94 ಸಿ ಯೋಜನೆಯಡಿಯಲ್ಲಿ 86 ಕುಂಟುಂಬಗಳಿಗೆ ಶಾಸಕ ಭೀಮಾನಾಯ್ಕ ಅವರಿಂದ...










