ಮೈಸೂರು : ಕೈ ತಪ್ಪಿದ ಮೇಯರ್ ಸ್ಥಾನ- ರಾಜೀನಾಮೆಗೆ ಮುಂದಾದ ಬಿಜೆಪಿ ಅಭ್ಯರ್ಥಿ!

132
Firstsuddi

ಮೈಸೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ನಿನ್ನೆ ನಡೆದ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಕೈತಪ್ಪಿದ್ದಕ್ಕೆ ಮನನೊಂದ ನಗರ ಪಾಲಿಕೆ ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ.

ಸುನಂದ ಪಾಲನೇತ್ರ ಅವರನ್ನು ಮೇಯರ್ ಮಾಡಲು ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅಖಾಡಕ್ಕಿಳಿದಿದ್ದರು. ಆದರೆ ಕೊನೆಕ್ಷಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸುನಂದ ಅವರಿಗೆ ಮೇಯರ್ ಸ್ಥಾನ ಕೈತಪ್ಪುವಂತೆ ಮಾಡಿದರು. ಈಗಾಗಿ ಸುನಂದ ಅವರು ಕ್ಷೇತ್ರದಲ್ಲಿನ ರಾಜಕಾರಣಕ್ಕೆ ಮನನೊಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ತಿಳಿಸಿದ್ದಾರೆ.

ಕುವೆಂಪುನಗರದ ವಾರ್ಡ್ ನಂ.59ರ ಪಾಲಿಕೆ ಸದಸ್ಯೆಯಾಗಿರುವ ನಾನು, ಪಕ್ಷದ ವತಿಯಿಂದ ಸ್ಫರ್ಧಿಸಿ ಪರಾಭವ ಹೊಂದಿದ್ದೇನೆ. ಈ ಬಗ್ಗೆ ನನಗೆ ಬೇಸರ ಉಂಟಾಗಿದೆ. ಚುನಾವಣೆಯಲ್ಲಿ ಸೋತ ನಂತರವೂ ನನಗೆ ಪಾಲಿಕೆ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸಲು ಮಾನಸಿಕ ಹಿಂಸೆ ಆಗುತ್ತಿದೆ. ಈ ಹಿನ್ನೆಲೆ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಸುನಂದ ಪಾಲನೇತ್ರ ಅವರು ಸಿಎಂಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.