ಚಿಕ್ಕಮಗಳೂರು : ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಕ್ಷರದಾಸೋಹ ಶಿಕ್ಷಣಾಧಿಕಾರಿ ಸುಂದರೇಶ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ಶುಕ್ರವಾರ ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿ ಅವರು ಮಾತನಾಡಿದರು.
ಬಹಳಷ್ಟು ವರ್ಷಗಳ ಹಿಂದೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು, ಹಳ್ಳಿಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಮೈಲಿಗಟ್ಟಲೆ ನಡೆದು ಅವರಿವರ ಮನೆಯಲ್ಲಿ ವಾರಾನ್ನದೂಟ ಮಾಡಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು ಎಂದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಶಿಕ್ಷಣ ಸುಲಭವಾಗಿದೆ, ಶಿಕ್ಷಣಕ್ಕಾಗಿ ಸರ್ಕಾರಗಳು ಕೋಟ್ಯಾಂತರ ರೂ ವ್ಯಯಿಸುತ್ತಿವೆ, ಸಮವಸ್ತ್ರ, ಸೈಕಲ್, ಪುಸ್ತಕ, ಬಿಸಿಯೂಟ, ಆರೋಗ್ಯ ತಪಾಸಣೆ, ಶೂ, ವಿಟಮಿನ್ ಸಿ ಮಾತ್ರೆಗಳು ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಉಚಿತವಾಗಿ ಶಿಕ್ಷಣವನ್ನೂ ನೀಡುತ್ತಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾದರೆ ಸರ್ಕಾರದ ಆಶಯ ಈಡೇರುತ್ತದೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉದಯಕುಮಾರ್ ಮಾತನಾಡಿ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ತಪ್ಪದೇ ಆಹಾರ ಪದಾರ್ಥಗಳನ್ನು ವಿತರಿಸಬೇಕು, ಮಕ್ಕಳು ಬಾರದಿದ್ದಲ್ಲಿ ಅವರ ಪೋಷಕರನ್ನು ಕರೆದು ನೀಡಬೇಕು ಎಂದು ಸೂಚಿಸಿದರು.
ಶಾಲಾಭಿವೃದ್ದಿ ಸಮಿತಿಯ ಸದಸ್ಯ ಜಗದೀಶಾಚಾರ್ ಮಾತನಾಡಿ ಮಕ್ಕಳು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಶಿಕ್ಷಣವಂತರಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಅಕ್ಷರ ದಾಸೋಹ ಕಾರ್ಯಕ್ರಮದಡಿ ಇದುವರೆಗೆ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ನೀಡಲಾಗುತ್ತಿತ್ತು, ಕೊರೋನಾ ಹಿನ್ನೆಲೆಯಲ್ಲಿ ಅದರ ಬದಲಿಗೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ತಮಿಳು ಶಾಲೆ ಮತ್ತು ಕನ್ನಡ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಾರಂಭದಲ್ಲಿ ಅಕ್ಕಿ, ಗೋಧಿ, ಎಣ್ಣೆ ಮತ್ತು ಉಪ್ಪು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ಜಯಂತಿ, ಸಾವಿತ್ರಿ, ನಾಗವೇಣಿ, ತಮಿಳು ಶಾಲೆ ಶಿಕ್ಷಕ ಶರವಣ ಉಪಸ್ಥಿತರಿದ್ದರು.










