ಪುತ್ತೂರು : ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿ ಸಿಲುಕಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಪಾಣಾಜೆ ಗ್ರಾಮದ ಕೋಟೆ ರಸ್ತೆಯ ಕೆಮಾಜೆ ಎಂಬಲ್ಲಿ ನಡೆದಿದೆ.
ಬಾಬು ಹಾಗೂ ರವಿ ಮೃತ ಕೂಲಿ ಕಾರ್ಮಿಕರು. ಇವರು ಪಾರ್ಪಳ್ಳ ನಿವಾಸಿಗಳಾಗಿದ್ದು, ಕಡಮ್ಮಾಜೆ ಹಾಜಿ ಅಬ್ದುಲ್ಲಾ ಎಂಬುವವರಿಗೆ ಸೇರಿದ ಕೋಳಿ ಫಾರ್ಮ್ನ ತ್ಯಾಜ್ಯ ವಿಲೇವಾರಿಗೆ ಜೆಸಿಬಿ ಮೂಲಕ ಹೊಂಡ ತೆಗೆಯುವ ವೇಳೆ ಗುಂಡಿಯ ಪೈಪ್ ಸರಿಪಡಿಸಲು ಇಳಿದಿದ್ದಾರೆ. ಈ ವೇಳೆ
ಪೈಪ್ ಮುರಿದು ಬಿದ್ದು ಇಬ್ಬರು ಕಾರ್ಮಿಕರು ಹೊಂಡಕ್ಕೆ ಬಿದ್ದಿದ್ದಾರೆ. ಪಕ್ಕದಲ್ಲಿಯೇ ಜೆಸಿಬಿ ಮಣ್ಣು ಅಗೆಯುತ್ತಿದ್ದುದರಿಂದ ಮಣ್ಣು ಜರಿದು ಹೊಂಡದೊಳಗೆ ಬಿದ್ದಿದೆ. ಪರಿಣಾಮ ಕಾರ್ಮಿಕರಿಬ್ಬರು ಮಣ್ಣಿನಡಿ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.
ಮೃತದೇಹಗಳನ್ನು ಪುತ್ತೂರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.










