ಸಿದ್ದರಾಮಯ್ಯನವರು ಸಿಎಂ ಆಗುವ ಭ್ರಮೆಯಲ್ಲಿದ್ದಾರೆ : ಸಚಿವ ಕೆ.ಎಸ್.ಈಶ್ವರಪ್ಪ

114
firstsuddi

ಶಿವಮೊಗ್ಗ : ಸಿದ್ದರಾಮಯ್ಯನವರು ಸಿಎಂ ಆಗುವ ಭ್ರಮೆಯಲ್ಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಸಿದ್ದರಾಮಯ್ಯನವರು ಅರ್ಜೆಂಟ್ ಆಗಿ ಮುಖ್ಯಮಂತ್ರಿಯಾಗಬೇಕಿದೆ. ಹಾಗಾಗಿ ಯಡಿಯೂರಪ್ಪನವರು ರಾಜೀನಾಮೆ ನೀಡಿದರೆ ಮುಖ್ಯಮಂತ್ರಿ ಆಗುತ್ತೀನಿ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಯಡಿಯೂರಪ್ಪನವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆ ಇಟ್ಟುಕೊಳ್ಳುವುದೂ ಬೇಡ. ನಾವು ಸಂಘಟನಾತ್ಮಕವಾಗಿ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿರುವ ಆಡಳಿತಾತ್ಮಕ ಸಮಸ್ಯೆಯನ್ನು ನಾವೇ ಖುದ್ದು ಬಗೆಹರಿಸಿಕೊಳ್ಳುತ್ತೇವೆ. ಮಸ್ಕಿ, ಬಸನಕಲ್ಯಾಣ ಹಾಗೂ ಬೆಳಗಾವಿಯಲ್ಲಿ ಕಾರ್ಯಕರ್ತರು ಜನರನ್ನು ಭೇಟಿಯಾಗಿ ತೃಪ್ತಿಪಡಿಸಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಭಿವೃದ್ದಿಯ ಕೆಲಸ ಮಾಡುತ್ತಿದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಅದೇ ರೀತಿ ರಾಜ್ಯ ಸರ್ಕಾರ ಸಹ ಒಳ್ಳೆಯ ಕೆಲಸ ಮಾಡುತ್ತಿದೆ. ಈಗ ನಾನು ಬರೆದಿರುವ ಪತ್ರ ಸಿಕ್ಕಿದೆ. ಈಶ್ವರಪ್ಪ ರಾಜ್ಯಪಾಲರ ಬಳಿ ಹೋಗಿದ್ದಾರೆ. ಇದರಿಂದ ರಾಜೀನಾಮೆ ನೀಡಬೇಕು ಎಂದು ಹೇಳುತ್ತಿದ್ದಾರೆ ಅಷ್ಟೇ . ಈ ಸಮಸ್ಯೆ ಆದಷ್ಟು ಬೇಗ ಮುಗಿಯುತ್ತೆ ಎಂಬ ವಿಶ್ವಾಸ ನನಗೆ ಇದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ತಿಳಿಸಿದರು.