ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು..!

135
firstsuddi

ಕೋಲಾರ : ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು ಅವರು ನಗರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಚೈತ್ರಾ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ವಿಚಾರವಾಗಿ ವಿವಾದ ಹಿನ್ನೆಲೆ ಮನನೊಂದು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಚೈತ್ರಾ ಕೋಟೂರು ಅವರು ಮಾರ್ಚ್.28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬವವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ದಿನವೇ ವಿವಾದ ಎಬ್ಬಿತ್ತು. ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಆದರೆ ಸಂಘಟನೆಗಳ ಬೆಂಬಲದೊಂದಿಗೆ ಬಲವಂತವಾಗಿ ನಾಗಾರ್ಜುನ್ ರನ್ನ ಬೆಂಗಳೂರಿನ ಬ್ಯಾಟರಾಯನಪುರ ದೇಗುಲದಲ್ಲಿ ವಿವಾಹ ಮಾಡಿಸಲಾಗಿದೆ. ಸಂಘಟನೆಗಳ ಬೆದರಿಕೆಯಿಂದ ನಾಗಾರ್ಜುನ್ ಅವರು ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ. ಆದರೆ ನಾಗಾರ್ಜುನ್ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ. ಅವರು ಚೈತ್ರಾ ಅವರ ಜೊತೆ ಗಲಾಟೆ ಮಾಡಿದ್ದಾರೆ. ಬೀದಿಯಲ್ಲಿ ಜಗಳ ಬೇಡ, ಮನೆಗೆ ಹೋಗಿ ಮಾತಾಡೋಣ ಎಂದು ಚೈತ್ರಾರವರು ತಮ್ಮ ನಿವಾಸಕ್ಕೆ ತೆರಳಿದರು. ಆದರೆ ಇಲ್ಲಿಯೂ ನಾಗಾರ್ಜುನ್ ಮನೆಯವರು ಗಲಾಟೆ ಮಾಡಿದ್ದಾರೆ. ಬಳಿಕ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಗಾರ್ಜುನ್ ನನಗೆ ಈ ವಿವಾಹ ಇಷ್ಟವಿಲ್ಲ ಎಂದು ಹೇಳಿದ್ದರು. ಆದರೆ ಚೈತ್ರಾ ಕೊಟ್ಟೂರು ಅವರು ಮಾತ್ರ ನನಗೆ ನಾಗಾರ್ಜುನ್ ಅಂದ್ರೆ ತುಂಬಾ ಇಷ್ಟ. ಅವರ ಜೊತೆಯೇ ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಬಳಿಕ ಇಬ್ಬರ ಕುಟುಂಬಸ್ಥರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧಾರ ಮಾಡಿದ್ದರು.