ಆರನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಮುಂದುವರೆದಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಇವತ್ತಿನಿಂದ ಸಾಲು ಸಾಲು ರಜೆ ಹಾಗೂ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಇಂದು ಸಹ ಪರದಾಟ ಮುಂದುವರಿದಿದೆ. ಹಲವು ಕಡೆಗಳಲ್ಲಿ ಓಡಾಟಕ್ಕೆ ಖಾಸಗಿ ಬಸ್ಸುಗಳು ಸಹ ಸಿಗುತ್ತಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಇದರ ಮಧ್ಯೆಯೂ ಮುಷ್ಕರ ನಿರತ ಬಿಎಂಟಿಸಿಯ 120 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಮುಷ್ಕರ ನಿರತ ನೌಕರರು ಸೇರಿದಂತೆ ಕೆಎಸ್ ಆರ್ ಟಿಸಿ 287 ನೌಕರರನ್ನು ರಾಜ್ಯ ಸರ್ಕಾರ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಇನ್ನೊಂದೆಡೆ ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯದ 8 ನಗರಗಳಲ್ಲಿ ಇಂದು ರಾತ್ರಿಯಿಂದ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ವಿಧಿಸಿದೆ. ಒಟ್ಟಾರೆಯಾಗಿ ಪ್ರಯಾಣಿಕರು ಪ್ರತಿನಿತ್ಯ ಬಸ್ ಗಳಿಲ್ಲದೇ ಪರದಾಡುವಂತಾಗಿದೆ.










