ಬೆಂಗಳೂರು : ರಾಜ್ಯ ಸರ್ಕಾರ ಘೋಷಿಸಿರುವ ಹದಿನಾಲ್ಕು ದಿನಗಳ ಲಾಕ್ ಡೌನ್ ನಲ್ಲಿ ಕೃಷಿ ಚಟುವಟಿಕೆಗಳಿಗಾಗಲೀ ಹಾಗೂ ರೈತರಿಗಾಗಲೀ ಯಾವುದೇ ತೊಂದರೆಯಾಗಬಾರದೆಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಮ್ ಆರಂಭಿಸಿದೆ. ಕಳೆದ ಬಾರಿಯಂತೆ ಈ ಹದಿನಾಲ್ಕು ದಿನಗಳ ಅವಧಿಯಲ್ಲಿ ಕೃಷಿ ಸಮಸ್ಯೆಗಳ ಬಗ್ಗೆ ಬೆಳೆಗಾರರ ಮಧ್ಯೆ ಸಂಪರ್ಕ ಸೇತುವೆಯಾಗಿ ಈ ಅಗ್ರಿ ವಾರ್ ರೂಮ್ ಕಾರ್ಯನಿರ್ವಹಿಸಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.
ಮುಂಗಾರು ಈಗಾಗಲೇ ಆರಂಭವಾಗುತ್ತಿರುವುದರಿಂದ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಅಧಿಕಾರಿಗಳಾಗಲೀ, ಇಲಾಖೆಯಾಗಲೀ ಕೃಷಿ ಪರಿಕರ ಸಾಗಾಣಿಕೆ ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಬಾರದು ಎಂದು ಕೃಷಿ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಕೃಷಿ ಕೇಂದ್ರ ಕಚೇರಿಯಲ್ಲಿ ಅಗ್ರಿ ವಾರ್ ರೂಮ್ ಮತ್ತೆ ತೆರೆದಿದ್ದು 080-22210237 ಹಾಗೂ 080-22212818 ಈ ಸಂಖ್ಯೆಗಳು ಸಹಾಯವಾಣಿಯಾಗಿ ಕಾರ್ಯನಿರ್ವಹಿಸಲಿವೆ. ಈ ಸಹಾಯವಾಣಿ ಅಗ್ರಿ ವಾರ್ ರೂಮ್ ಇಂದಿನಿಂದ(ಏ.28) ಆರಂಭವಾಗಿದ್ದು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಕೃಷಿ ಪ್ರಧಾನ ಕಚೇರಿಯಲ್ಲಿ ಒಬ್ಬ ಉಪಕೃಷಿ ನಿರ್ದೇಶಕರು ಹಾಗೂ ಇಬ್ಬರು ತಾಂತ್ರಿಕ ಅಧಿಕಾರಿಗಳು ಉಸ್ತುವಾರಿಗೆ ನೇಮಿಸಲಾಗಿದೆ ಎಂದರು.










