ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಸಿಎಂಗೆ ಪತ್ರ ಬರೆದ ಬಸವರಾಜ ಹೊರಟ್ಟಿ.

98
firstsuddi

ಬೆಂಗಳೂರು : ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ :
ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹಳಷ್ಟು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ರಾಜ್ಯದಲ್ಲಿ 412 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,564 ಜನ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ನಿಯಮಾವಳಿ ಪ್ರಕಾರ, ಈ ಅತಿಥಿ ಉಪನ್ಯಾಸಕರು ವಿದ್ಯಾರ್ಹತೆ ಹೊಂದಿರುತ್ತಾರೆ. ಹಲವಾರು ವರ್ಷಗಳಿಂದ ಕಡಿಮೆ ಗೌರವಧನ ಪಡೆಯುತ್ತ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಸತತವಾಗಿ ನೋವೆಲ್ ಕೊರೊನಾ ವೈರಸ್ ಕೋವಿಡ್-19 ಕಾರಣದಿಂದ ವಿಷಮ ಪರಿಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಅತಿ ಕಡಿಮೆ ವೇತನ ಮತ್ತು ಸೇವಾ ಭದ್ರತೆ ಇಲ್ಲದ ಕಾರಣ ರಾಜ್ಯದ ಹಲವಾರು ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲ್ಲಾ ವಿದ್ಯಾರ್ಹತೆ ಹೊಂದಿ ಹಲವು ವರ್ಷಗಳ ಅನುಭವ ಅತಿಥಿ ಉಪನ್ಯಾಸಕರಿಗಿದೆ. ಹಲವಾರು ಜನ ವಯೋಮಿತಿ ಮೀರುತ್ತಿರುವುದರಿಂದ ಅಭದ್ರತೆಯಲ್ಲಿ ಸಿಲುಕಿದ್ದಾರೆ.

ಆದ್ದರಿಂದ ಇವರಂತೆಯೇ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ, ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ, ಸ್ಟಾಪ್ ಗ್ಯಾಪ್, ಗುತ್ತಿಗೆ ಆಧಾರಿತ, ಅರೆಕಾಲಿಕ ಉಪನ್ಯಾಸಕರುಗಳನ್ನು ಸರ್ಕಾರ ಮಾನವೀಯತೆಯ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ತಂದು ಅಂಥವರನ್ನ 1982,1992, 1996 & 2003ರಲ್ಲಿ ಖಾಯಂ ಮಾಡಿರುವ ಉದಾಹರಣೆಗಳಿವೆ. ಅದೇ ಮಾದರಿಯಲ್ಲಿ ಈಗ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನ ಖಾಯಂಗೊಳಿಸುವಂತೆ ಬಸವರಾಜ ಹೊರಟ್ಟಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.