ಮೈಸೂರು:ಸಣ್ಣ ಜಗಳ ಆಗಿದ್ದು ನಿಜ, ಆದರೆ ದರ್ಶನ್ ಹಲ್ಲೆ ಮಾಡಿಲ್ಲ….

82

ಮೈಸೂರು : ಹೋಟೇಲಿನಲ್ಲಿ ವೇಟರ್ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಂದೇಶ್ ದಿ ಪ್ರಿನ್ಸ್ ಮಾಲೀಕ ಸಂದೇಶ್ ನಾಗರಾಜ್ ಅವರ ಪುತ್ರ ಸಣ್ಣ ಜಗಳ ಆಗಿದ್ದು ನಿಜ, ಆದರೆ ದರ್ಶನ್ ಹಲ್ಲೆ ಮಾಡಿಲ್ಲ. ಬೈದಿದ್ದಾರೆ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದು ನಾನು ಕೂಡ ಇದ್ದೆ. ಬೈಬೇಡಪ್ಪ ನಮ್ಮ ಕಾರ್ಮಿಕರಿಗೆ. ನಮಗೆ ಕೆಲಸಗಾರರು ಸಿಗುವುದಿಲ್ಲ. ನೀನು ಯಾವುದೋ ಟೆನ್ಶನ್ ನಲ್ಲಿ ನಮ್ಮವರಿಗೆ ಯಾಕೆ ಬೈತೀಯಾ ಎಂದಿದ್ದೆ. ಅದಕ್ಕೆ ಅವನು ಕೋಪ ಕೂಡ ಮಾಡಿಕೊಂಡಿದ್ದ. ಸಣ್ಣ ಮಟ್ಟಿನ ಜಗಳ ನಡೆದಿದೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ಈ ಬಗ್ಗೆ ನಮ್ಮ ತಂದೆಯವರಿಗೆ ಏನೂ ಗೊತ್ತಿಲ್ಲ. ಹೋಟೆಲ್ ನಡೆಸುತ್ತಿರುವುದು ನಾನು, ಹೀಗಾಗಿ ಅವರಿಗೂ ಈ ಘಟನೆಗೂ ಸಂಬಂಧವಿಲ್ಲ ಎಂದರು.

ನಾವು ಶೂಟಿಂಗ್ ನಲ್ಲೂ ಜಗಳ ಆಡುತ್ತೇವೆ. ನಾನು ತಪ್ಪು ಮಾಡಿದಾಗ ಅವನು ಹೇಳುತ್ತಾನೆ, ಅವನು ತಪ್ಪು ಮಾಡಿದಾಗ ನಾನು ಹೇಳ್ತೇನೆ. ಫ್ರೆಂಡ್ ಶಿಪ್ ನಲ್ಲಿ ಇದೆಲ್ಲ ಮಾಮೂಲಿ. ಆದರೆ ಗಲಾಟೆ ಸಂಬಂಧ ತೋಟದಲ್ಲಿ ಏನೇನು ಆಗಿದೆ ಎಂದು ಗೊತ್ತಿಲ್ಲ. ನನ್ನ ಕಾರ್ಮಿಕರಿಗೆ ಏನಾದರೂ ಆದರೆ ನಾನು ಬಿಡ್ತೀನಾ ಎಂದು ಸಂದೇಶ್ ಪ್ರಶ್ನಿಸಿದರು.

ಹೊಟ್ಟೆಪಾಡಿಗಾಗಿ ಹೋಟೆಲ್ ಮಾಡಿದ್ದೇವೆ. ಹೀಗಾಗಿ ಯಾರೇ ಅತಿಥಿಗಳು ಬಂದು ಏನೇ ಮಾತಾಡಿದ್ರೂ ನಾವು ಸಹಿಸಿಕೊಳ್ಳಬೇಕು. ಅಲ್ಲದೆ ಅವರು ಏನೇ ಬೈದ್ರೂ ಸಹಿಸಿಕೊಳ್ಳಬೇಕಾಗುತ್ತದೆ. ಹೋಟೆಲ್ ಅಂದ್ರೆ ಸರ್ವಿಸ್ ಇಂಡಸ್ಟ್ರಿ. ಒಟ್ಟಿನಲ್ಲಿ ಇಲ್ಲಿ ನಮಗೆ ಗ್ರಾಹಕರೇ ದೇವರಾಗಿರುತ್ತಾರೆ. ನಿಯಮಗಳ ಪ್ರಕಾರ ಅವರು ಏನು ಹೇಳ್ತಾರೆ ಅದನ್ನು ನಾವು ಕೊಡಬೇಕಾಗುತ್ತದೆ ಎಂದು ತಿಳಿಸಿದರು.