ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ…

104
firstsuddi

ಬೆಂಗಳೂರು : ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಸಿಸಿಬಿ ಪೊಲೀಸರು ಯುವರಾಜ್ ಮನೆಯ ಮೇಲೆ ದಾಳಿ ಮಾಡಿದ್ದ ವೇಳೆ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ ನ ಪರ್ಸನಲ್ ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿತ್ತು. ಇದೀಗ ಎಲ್ಲ ದಾಖಲೆಗಳನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಮೊದಲ ಪ್ರಕರಣ : ಎಇಇ ಹುದ್ದೆ ಕೊಡಿಸುವುದಾಗಿ ರಾಜಾಜಿನಗರ ನಿವಾಸಿ ಜಿ.ನರಸಿಂಹ ಮೂರ್ತಿಯವರಿಗೆ ಲಕ್ಷಾಂತರ ಹಣ ಪಡೆದು ವಂಚನೆ ಮಾಡಲಾಗಿದೆ. ವಾಪಸ್ ಹಣ ಕೇಳಿದಾಗ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟ ಹಣದಿಂದಲೇ ನಿನ್ನ ಕೊಲೆಗೆ ಸುಪಾರಿ ಕೊಡುತ್ತೇನೆ. ನಿನ್ನ ಹಣದಿಂದಲೇ ರೌಡಿಗಳಿಂದ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಯುವರಾಜ್ ಸ್ವಾಮಿ ದೂರುದಾರರಿಗೆ ಜೀವ ಬೆದರಿಕೆ ಹಾಕಿದ್ದಾನೆ.

ಎರಡನೇ ಪ್ರಕರಣ : ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಡ್ರೈವರ್ ಉಮೇಶ್ ದೂರು ನೀಡಿದ್ದ. ತನ್ನ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ಗೆ ವಂಚಿಸಿದ್ದ ಯುವರಾಜ್ ಕೆಲಸಗಾರನ ಬ್ಯಾಂಕ್ ಅಕೌಂಟ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದನು. ತಾನು ವಂಚಿಸಿ ಪಡೆದ ಹಣವನ್ನು ಡೆಪಾಸಿಟ್ ಮಾಡಿದ್ದ. ಐಟಿ ಇಲಾಖೆಯಿಂದ ಬಂದ ನೊಟೀಸ್ ನೋಡಿ ಡ್ರೈವರ್ ಗಾಬರಿಯಾಗಿದ್ದ. ಯುವರಾಜ್ನನ್ನು ಉಮೇಶ್ ಪ್ರಶ್ನೆ ಮಾಡಿದಾಗ ಬಡಿದು ಮನೆಯಿಂದ ಆಚೆ ಹಾಕಿದ್ದ ಎಂದು ದೂರಲಾಗಿತ್ತು.

ಮೂರನೇ ಪ್ರಕರಣ : ಸೈಬರ್ ಠಾಣೆಗೆ ಉದ್ಯಮಿ ಸುಧೀಂದ್ರ ರೆಡ್ಡಿ ನೀಡಿದ್ದ ದೂರಿನಲ್ಲಿ ಕೆಎಸ್ ಆರ್ ಟಿಸಿ ಚೇರ್ ಮನ್ ಹುದ್ದೆ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದ. ರೈತ ಮತ್ತು ಉದ್ಯಮಿಯಾದ ಸುಧೀಂದ್ರ ರೆಡ್ಡಿಯಿಂದ 1 ಕೋಟಿ ರೂ. ತೆಗೆದುಕೊಂಡು ಮೋಸ ಮಾಡಿದ್ದ. ಬಿಜೆಪಿ ಕಾರ್ಯಕರ್ತ ಮಧುರಾಜ್ ಎಂಬಾತನ ಜೊತೆ ಕೃತ್ಯ ಎಸಗಿದ್ದನು. ಈ ಸಂಬಂಧ ಯುವರಾಜ್ ಮತ್ತು ಮಧುರಾಜ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು.

ಸಚಿವ ಮುರುಗೇಶ್ ನಿರಾಣಿ, ಪ್ರಮೋದ್ ಮಧ್ವರಾಜ್, ಉಮೇಶ್ ಕತ್ತಿ ಲೆಟರ್ ಹೆಡ್ ಮತ್ತು ಬಯೋಡೆಟಾ, ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಿನಲ್ಲಿ ಪತ್ರ, ಶ್ರೀರಾಮುಲು ಲೆಟರ್ ಹೆಡ್ನಲ್ಲಿ ಗೃಹ ಇಲಾಖೆಗೆ ಬರೆದಿರುವ ಲೆಟರ್, ಬಿಜೆಪಿ ಪಕ್ಷದ ಅನೇಕ ಲೆಟರ್ ಹೆಡ್ ಸಮೇತ ಪತ್ರಗಳು, ಉಪಚುನಾವಣೆಗೆ ವಸಂತ್ ಬೆಳವಾಯಿ ಟಿಕೆಟ್ ಕೋರಿಕೆ ಪತ್ರ, ಟಿ ಶ್ಯಾಮ್ ಭಟ್ ವೈಯಕ್ತಿಕ ಸೇವಾ ವಿವರ ಇರುವ ದಾಖಲೆಗಳು, ನಿವೃತ್ತ ಜಡ್ಜ್ ಇಂದ್ರಕಲಾ ಪರ್ಸನಲ್ ಪ್ರೊಫೈಲ್ ಗಳನ್ನು ಚಾರ್ಜ್ ಶೀಟ್ ಜೊತೆಗೆ ಪ್ರಮುಖ ದಾಖಲೆಗಳನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

9 ಮಂದಿ ಸಾಕ್ಷಿಗಳ ಸಮೇತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವರಾಜ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 420, 504, 506 ಅಡಿ ಚಾರ್ಜ್ ಸಲ್ಲಿಸಲಾಗಿದೆ. ಮಾಡಿದ ಕೃತ್ಯವನ್ನು ಯುವರಾಜ್ ಸ್ವಾಮಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.