ಬೆಂಗಳೂರು : ನಿನ್ನೆ ಎಂ.ಎಂ. ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ ಮನೀಶ್ ಹಾಗೂ ಸೌರವ್ ಎಂಬುವರು ಸಜೀವ ದಹನಗೊಂಡಿದ್ದರು. ಇಂದು ಮತ್ತಿಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.
ಮೃತರನ್ನು ಫ್ಯಾಕ್ಟರಿ ಪಾಲುದಾರ ಸಚಿನ್ ಹಾಗೂ ಕೆಲಸ ಮಾಡುತ್ತಿದ್ದ ಧನಲಕ್ಷ್ಮಿ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಾಯಾಳು ಶಾಂತಿ ಎಂಬಾಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಯ್ಲರ್ ಉಷ್ಣತೆ ಹೆಚ್ಚಾಗಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳು ಕಂಡುಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ತನಿಖೆ ವರದಿ ನೀಡಲಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣವೇನೆಂಬುದು ತಿಳಿದುಬರಲಿದೆ.










