ಚಿಕ್ಕಬಳ್ಳಾಪುರ : ಅನೈತಿಕ ಸಂಬಂಧದ ಹಿನ್ನಲೆ ಸುಪಾರಿ ಕೊಟ್ಟು ಗಂಡನಿಗೆ ಗುಂಡು ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಪತ್ನಿ ಈಕೆಯ ಪ್ರಿಯಕರ ಹಾಗೂ ಪ್ರಿಯಕರನ ಸಹೋದರ ಸೇರಿ 6 ಮಂದಿಯನ್ನ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಕೊಟ್ಟು ಗಂಡನ ಮೇಲೆ ಗುಂಡು ಹೊಡೆಸಿದ್ದ ಪತ್ನಿಯ ಹೆಸರು ಸುಮಿತ್ರಾ. ಗುಂಡೇಟಿಗೆ ಒಳಗಾದವನು ಗೋವಿಂದಪ್ಪ.
ಘಟನೆ ಹಿನ್ನಲೆ :
ಆಗಸ್ಟ್ 18 ರಂದು ಶಿಡ್ಲಘಟ್ಟ ನಗರದಲ್ಲಿ ಹತ್ಯೆ ಯತ್ನ ನಡೆದಿತ್ತು. ಶಿಡ್ಲಘಟ್ಟ ನಗರದ ಇದ್ಲೂಡು ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಗೋವಿಂದಪ್ಪ ಮೇಲೆ ಪಲ್ಸರ್ ಬೈಕಿನಲ್ಲಿ ಬಂದ ಅಪರಿಚಿತರು ಮಸಲ್ ಗನ್ ಬಳಸಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ರು. ಘಟನೆಯಲ್ಲಿ ಗೋವಿಂದಪ್ಪ ಬೆನ್ನಿನ ಭಾಗ ಸೇರಿ ತಲೆಯ ಭಾಗದಲ್ಲಿ ಗಾಯಗಳಾಗಿದ್ದವು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗೋವಿಂದಪ್ಪ ಗುಣಮುಖರಾಗಿದ್ದಾರೆ. ಗೋವಿಂದಪ್ಪ ಪತ್ನಿ ಸುಮಿತ್ರ, ಮುನಿಕೃಷ್ಣ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಗಂಡ ಗೋವಿಂದಪ್ಪ ಜಗಳ ಮಾಡಿ ಬುದ್ಧಿವಾದ ಹೇಳಿದ್ದಾರೆ. ಹೀಗಾಗಿ ಪತ್ನಿ ಸುಮಿತ್ರಾ ಪ್ರಿಯಕರ ಮುನಿಕೃಷ್ಣ ಹಾಗೂ ಸಹೋದರ ರಾಮಕೃಷ್ಣ ಜೊತೆ ಸೇರಿ 2 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ರು.
ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಇದೆಲ್ಲಾ ಗೋವಿಂದಪ್ಪನ ಪತ್ನಿ ಸುಮಿತ್ರಾಳದ್ದೇ ಕೃತ್ಯ ಅನ್ನೋ ಸತ್ಯ ಬೆಳಕಿಗೆ ಬಂದಿದೆ. ಇದೀಗ ಸುಮಿತ್ರಾ, ಸುಮಿತ್ರಾ ಪ್ರಿಯಕರ ಮುನಿಕೃಷ್ಣ, ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣ, ಹರೀಶ, ಪ್ರವೀಣ್ ಮತ್ತು ಮುರಳಿಯನ್ನು ಪೊಲೀಸರು ಬಂಧಿಸಿದ್ದಾರೆ.










