ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸುಮಲತಾ ಅಂಬರೀಶ್.

74
firstsuddi

ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ತಾಲ್ಲೂಕಿನ ಹನಕೆರೆ ಗ್ರಾಮದ ಬಳಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿಯೇ ಮನೆ ನಿರ್ಮಾಣ ಮಾಡಿ ವಾಸವಿರುವುದಾಗಿ ಮಾತು ನೀಡಿದ್ದರು. ಅದರಂತೆ ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸುಮಲತಾ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಪುತ್ರ ಅಭಿಷೇಕ್ ಅಂಬರೀಷ್ ಅವರ ರಾಜಕೀಯ ಪ್ರವೇಶಕ್ಕೆ ಸಿದ್ಧತೆಯೂ ಆರಂಭವಾಯ್ತಾ ಎಂಬ ಕುತೂಹಲ ಮೂಡಿದೆ.

ಮನೆ ನಿರ್ಮಾಣಕ್ಕಾಗಿ ತನ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹನಕೆರೆ ಶಶಿ ಎಂಬುವರಿಂದ ಮುಕ್ಕಾಲು ಎಕರೆ ಜಾಗವನ್ನು ಖರೀದಿಸಲಾಗಿದ್ದು, ಇನ್ನು 6 ತಿಂಗಳಲ್ಲಿಯೇ ಮನೆ ನಿರ್ಮಾಣ ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. 6-7 ತಿಂಗಳಲ್ಲಿ ಮನೆ ನಿರ್ಮಿಸಿ ಅಲ್ಲಿಂದಲೇ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸುವ ಚಿಂತನೆ ಇದೆ ಎಂಬ ಮಾತುಗಳು ಕೇಳಿಬಂದಿವೆ.

ಸ್ವಂತ ಮನೆ ನಿರ್ಮಾಣದಲ್ಲಿ ಪುತ್ರ ಹಾಗೂ ನಟ ಅಭಿಷೇಕ್ ಅಂಬರೀಶ್ ರಾಜಕೀಯ ಭವಿಷ್ಯ ಅಡಗಿದೆ ಎನ್ನಲಾಗುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಹಲವು ದಿನಗಳ ಹಿಂದೆ ಮದ್ದೂರಿಗೆ ಭೇಟಿ ನೀಡಿದ್ದ ಅಭಿಷೇಕ್ ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು. ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್ನನ್ನು ಕಣಕ್ಕಿಸಲು ಸುಮಲತಾ ರಾಜಕೀಯ ಸಿದ್ಧತೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಕಾರಣಕ್ಕೆ ಜಿಲ್ಲಾಕೇಂದ್ರ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡದೆ ಹನಕೆರೆಯಲ್ಲೇ ಸ್ವಂತ ಮನೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.