ಹುಬ್ಬಳ್ಳಿ : ಬೆಲೆ ಏರಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ನಗರದ ಅಶೋಕ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಆಗಿದೆ. ಸೆಪ್ಟೆಂಬರ್. 5 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಲಿದ್ದಾರೆ. ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ಕೊರೊನಾ ನಿಯಂತ್ರಣ ಮಾಡೋಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ತಜ್ಞರ ಜೊತೆ ಮಾತಾಡಿ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಜಿಲ್ಲೆಗಳಿಂದ ಅಂತಿಮ ವರದಿ ತರಿಸಿ ಸಾರ್ವಜನಿಕ ಗಣೇಶೋತ್ಸವದ ಕುರಿತು ತೀರ್ಮಾನ ಕೈಗೊಳ್ಳುವುದು. ಕೇರಳ ಗಡಿಯಿಂದ ಕರ್ನಾಟಕಕ್ಕೆ ನಕಲಿ ಆರ್ ಟಿಪಿಸಿಆರ್ ನೆಗಟಿವ್ ರಿಪೋರ್ಟ್ ಪಡೆದು ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಎಲ್ಲವನ್ನ ಚೆಕ್ ಮಾಡಿ ಈಗ ಬಿಡಲಾಗುತ್ತಿದೆ. ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಮಾಡಿಲ್ಲ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ ಎನ್ನುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ಮಾಡೋಕೆ ಇಷ್ಟಪಡಲ್ಲ ಎಂದು ಹೇಳಿದರು.










