ಹೆತ್ತವರ ಕಿರುಕುಳ – ಡೆತ್ ನೋಟ್ ಬರೆದಿಟ್ಟು ಮಗ ಆತ್ಮಹತ್ಯೆ!

70
firstsuddi

ಮಂಡ್ಯ : ಅಪ್ಪ-ಅಮ್ಮನ ಕಿರುಕುಳ ತಾಳಲಾರದೇ ಮಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗಿರೀಶ್(32)ಮೃತ ದುರ್ದೈವಿ. ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತನ್ನ ಸಾವಿಗೆ ಅಪ್ಪ, ಅಮ್ಮನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ಗಿರೀಶ್ ತಂದೆ ರಾಜು ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ತಾಯಿ ದೇವಮಣಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಗಿರೀಶ್ 11 ವರ್ಷದ ಹಿಂದೆ ತ್ರಿವೇಣಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಇಷ್ಟು ವರ್ಷವಾದರೂ ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಅಪ್ಪ-ಅಮ್ಮ ಮಗ ಗಿರೀಶ್ ಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಆಸ್ತಿ ಕೊಟ್ಟಿರಲಿಲ್ಲ ಎಂದು ಆರೋಪ ಮಾಡಿದ್ದಾರೆ. ಗಿರೀಶ್ ಮತ್ತು ಅವರ ಪತ್ನಿಗೆ ತಮ್ಮ ಮನೆಯ ಕೊಟ್ಟಿಗೆಯಲ್ಲಿ ವಾಸ ಮಾಡಲು ಬಿಟ್ಟಿದ್ದರು. ಅಲ್ಲದೇ ಮಕ್ಕಳಾಗಲಿಲ್ಲ ಎಂದು ದಿನೇ, ದಿನೇ ತಂದೆ-ತಾಯಿಗಳು ಗಿರೀಶ್ ಹಾಗೂ ಆತನ ಪತ್ನಿಯನ್ನು ಹಂಗಿಸುತ್ತಿದ್ದರು. ಇದರಿಂದ ಮನನೊಂದು ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಮಗನ ಸಾವಿನ ಬಳಿಕ ತಂದೆ-ತಾಯಿ ತಲೆ ಮರೆಸಿಕೊಂಡಿದ್ದು, ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.