ಮೂಡಿಗೆರೆ : ಅಕಾಲಿಕ ಮಳೆಗೆ ನೆಲಕಚ್ಚಿದ ಕಾಫಿ,ಮೆಣಸು – ಸಂಕಷ್ಟದಲ್ಲಿ ಬೆಳೆಗಾರರು…

104
firstsuddi

ಕೊಟ್ಟಿಗೆಹಾರ : ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಮೆಣಸು ಬೆಳೆಗಳು ನೆಲಕಚ್ಚುತ್ತಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲದಿನಗಳಿಂದ ಸುರಿಯುತ್ತಿರುವ ಬಾರಿ ಗಾಳಿ ಮಳೆಯಿಂದಾಗಿ ಗಿಡದಲ್ಲಿರುವ ಕಾಫಿ ಮಣ್ಣು ಪಾಲಾಗುತ್ತಿದ್ದು ಅತಿಯಾದ ಶೀತದಿಂದಾಗಿ ಎಲೆ, ಹಣ್ಣು ಗಿಡದಲ್ಲಿಯೆ ಕಪ್ಪಾಗಿ ಕೊಳೆಯಲಾರಂಬಿಸಿವೆ. ಕಾಳುಮೆಣಸಿನ ಬಳ್ಳಿಯಲ್ಲಿ ಗರಿಗಟ್ಟಾಲಾರಂಬಿಸಿದ್ದು ಗರಿಗಟ್ಟಿದ್ದ ತೆನೆಗಳು ಅತಿಯಾದ ಗಾಳಿ ಮಳೆಗೆ ಉದುರತೊಡಗಿವೆ. ಮಳೆ ಬಿಡುವು ಕೊಡದೆ ಇರುವುದರಿಂದ ಶೀತ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲು ಸಾಧ್ಯವಿಲ್ಲದಂತಾಗಿದೆ. ಒಟ್ಟಿನಲ್ಲಿ ಕಾಫಿ, ಕಾಳುಮೆಣಸು ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಮಳೆ ಬಿಡುವು ನೀಡದೇ ಇರುವುದರಿಂದ ಬಹುತೇಕ ಕಾಫಿ ಬೆಳೆಗಾರರು ಹಣ್ಣಾಗಿ ನಿಂತಿದ್ದ ಅರೇಬೀಕಾ ಕಾಫಿ ಕುಯ್ಲು ಮಾಡಲು ಸಾಧ್ಯವಾಗದೇ ಕೈಚೆಲ್ಲಿ ಕುಳಿತಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಕಾಫಿ ಕುಯ್ಲು ಆರಂಭಿಸಿದ್ದ ಕಾಫಿ ಬೆಳೆಗಾರರು ಕಾಫಿ ಒಣಗಿಸಲು ಸಾಧ್ಯವಾಗದೇ ಚೀಲಕ್ಕೆ ತುಂಬಿಸಿ ಇಟ್ಟಿದ್ದು ಮಳೆಯ ಶೀತದಿಂದಾಗಿ ಕಾಫಿ ಚೀಲದಲ್ಲಿಯೆ ಕೊಳೆಯತೊಡಗಿದೆ.

ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು ಸರ್ಕಾರ ಬೆಳೆಗಾರರಿಗೆ ಬೆಳೆ ಪರಿಹಾರ ನೀಡುವ ಮೂಲಕ ಸಹಾಯಕ್ಕೆ ಬರಬೇಕು. ತಾಲ್ಲೂಕಿನ ಬಹುತೇಕ ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದು ಬೆಳೆವಿಮೆಯ ಪರಿಹಾರವನ್ನು ನೀಡಬೇಕು ಎಂದು ರಾಜ್ಯ ಮಹಿಳಾ ರೈತ ಸಂಘದ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣಗೌಡ ಒತ್ತಾಯಿಸಿದ್ದಾರೆ.