ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ನಡೆಸಿರುವ ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವ ಕುರಿತು ಸೆಪ್ಟೆಂಬರ್.27ರಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಸರ್ಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಎಸ್ ಐಟಿ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಿದ್ಧಪಡಿಸಿದೆ. ಸಿಆರ್ ಪಿಸಿ ಪ್ರಕಾರ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ವಕೀಲೆ ಇಂದಿರಾ ಜೈಸಿಂಗ್, ಯಾವುದೇ ಕಾರಣಕ್ಕೂ ಅಂತಿಮ ವರದಿ ಸಲ್ಲಿಕೆಗೆ ನ್ಯಾಯಾಲಯ ಅನುಮತಿ ನೀಡಬಾರದು. ತನಿಖೆ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಎಸ್ಐಟಿ ತನಿಖಾ ವರದಿ ಈಗಾಗಲೇ ಸೋರಿಕೆಯಾಗಿದೆ. ಅದರಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದಂತಿದೆ. ತನಿಖಾ ವರದಿ ಸೋರಿಕೆ ಬಗ್ಗೆಯೂ ತನಿಖೆಯಾಗಬೇಕು. ಎಸ್ ಐಟಿ ಮುಖ್ಯಸ್ಥರಿಲ್ಲದೆ ಬೇರೆ ಬೇರೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ವರದಿಯು ಸಿಆರ್ ಪಿಸಿ ಸೆಕ್ಷನ್ 173ಕ್ಕೆ ಅನುಗುಣವಾಗಿಲ್ಲ. ಇದೇ ಕಾರಣಕ್ಕೆ ಹಿಂದಿನ ಸಿಜೆ ಅಂತಿಮ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಬಂಧ ವಿಧಿಸಿದ್ದಾರೆ. ಪೊಲೀಸ್ ಆಯುಕ್ತರು ರಚಿಸಿದ ಎಸ್ಐಟಿ ಬಗ್ಗೆ ವಿಶ್ವಾಸವಿಲ್ಲ, ಹೀಗಾಗಿ ಅಂತಿಮ ವರದಿ ಸಲ್ಲಿಕೆಗೆ ಅನುಮತಿ ನೀಡಬಾರದು ಎಂದು ವಾದಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗಳ ಮೂಲ ವಿಚಾರಣೆಗೆ ಸಾಕಷ್ಟು ಸಮಯಬೇಕಾಗಿದೆ. ಹಾಗಾಗಿ, ಸದ್ಯ ಎಸ್ ಐಟಿ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸದಂತೆ ಸೂಚನೆ ನೀಡಿ, ವಿಚಾರಣೆಯನ್ನು ಸೆ.27ಕ್ಕೆ ಮೂಂದೂಡಿತು.










