ಇಂದು ಸ್ಯಾಂಡಲ್ ವುಡ್, ಅಭಿಮಾನಿಗಳ ಪಾಲಿಗೆ ವಿಶೇಷ ದಿನ. ಏಕೆಂದರೆ ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿದ್ದು ಸೆಪ್ಟೆಂಬರ್ 18ರಂದೇ. ಈ ವಿಶೇಷ ದಿನವನ್ನು ಅಭಿಮಾನಿಗಳು ನಾನಾ ರೀತಿಯಲ್ಲಿ ಮೂವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿದೆ.
ಸ್ಯಾಂಡಲ್ ವುಡ್ ನ ಹಿರಿಯ ನಟ ವಿಷ್ಣುವರ್ಧನ್ ಅವರು ನಮ್ಮ ಜತೆಗೆ ಇದ್ದಿದ್ದರೆ ಇಂದು 71ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಇಹಲೋಕ ತ್ಯಜಿಸಿ 12 ವರ್ಷಗಳಾಗಿದ್ದು, ಅವರ ಅಭಿಮಾನಿಗಳು ಈ ಬಾರಿಯೂ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಕೆಲ ಅಭಿಮಾನಿ ಸಂಘಗಳು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ವಿಷ್ಣುವರ್ಧನ್ಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿವೆ.
ಇಂದು ಉಪೇಂದ್ರ ಅವರ ಜನ್ಮದಿನ. ಆದರೆ, ಉಪ್ಪಿ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಉಪ್ಪಿ ಪೋಸ್ಟ್ ಮಾಡಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಉಪ್ಪಿ ಜನ್ಮದಿನದ ಸಂಭ್ರಮ ಜೋರಾಗಿದೆ.
ಫ್ಯಾಮಿಲಿ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಉಪೇಂದ್ರ ತಮ್ಮ 53ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಕೂಡ ಸೆಪ್ಟೆಂಬರ್ 18ರಂದು ಹುಟ್ಟಿದ್ದಾರೆ. ಈ ಹಿನ್ನೆಲೆ, ಚಿತ್ರರಂಗದವರು ಹಾಗೂ ಅಭಿಮಾನಿಗಳಿಂದ ಶ್ರುತಿಗೆ ಹುಟ್ಟು ಹಬ್ಬದ ಶುಭಾಶಯ ಹರಿದು ಬರುತ್ತಿದೆ.










