ಬೆಂಗಳೂರು : ನಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮಗುವಿನ ಪೋಷಕರು ಮತ್ತು ಸ್ಥಳೀಯರು ಸಂಜಯನಗರ ಠಾಣೆ ಎದುರು ಜಮಾಯಿಸಿ ತಡರಾತ್ರಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಠಾಣೆಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಏನಿದು ಪ್ರಕರಣ?
ಆರೋಪಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಗೆದ್ದಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಆರೋಪಿ ಮನೆಯ ಪಕ್ಕದಲ್ಲೇ ನಿನ್ನೆ ಸಂಜೆ ಆಟವಾಡುತ್ತಿದ್ದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪೋಷಕರು ದೂರು ನೀಡಿದ ಕೂಡಲೇ ಸಂಜಯನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಇತ್ತ ಘಟನೆಯಿಂದ ಆಕ್ರೋಶಗೊಂಡ ನೂರಾರು ಸ್ಥಳೀಯರು ಠಾಣೆ ಮುಂದೆ ಜಮಾಯಿಸಿ ತಡರಾತ್ರಿ ಗಲಾಟೆ ಮಾಡಿದರು. ಅಲ್ಲದೇ ಆರೋಪಿಯನ್ನು ಕರೆದುಕೊಂಡು ಹೋಗಲು ಮುಂದಾದ ಪೊಲೀಸರ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸಾರ್ವಜನಿಕರ ಮನವೊಲಿಸಿ ಕಳುಹಿಸಿದರು.
ಕೃತ್ಯ ನಿನ್ನೆ 5 ಗಂಟೆ ಸುಮಾರಿಗೆ ಮಗುವಿನ ತಾಯಿ ಗಮನಕ್ಕೆ ಬಂದಿದೆ. ನಿನ್ನೆ ರಾತ್ರಿ 8 ಗಂಟೆಗೆ ದೂರು ಬಂದಿದೆ. ತಕ್ಷಣವೇ ಆರೋಪಿಯನ್ನು ಬಂಧಿಸಿದ್ದೇವೆ. ಪೋಕ್ಸೋ ಕಾಯಿದೆ ಅಡಿ ದೂರು ದಾಖಲಿಸಿದ್ದೇವೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.










