ಮಂಗಳೂರು : ಅತ್ಯಾಚಾರ ಸಂತ್ರಸ್ತೆಯನ್ನೇ ದೈಹಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆ ಕಾನ್ಸ್ ಟೇಬಲ್ ಶಿವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಯುವತಿ ಈಗಾಗಲೇ ಅತ್ಯಾಚಾರ ಸಂತ್ರಸ್ತೆಯಾಗಿದ್ದಳು ಈ ಘಟನೆ ಸಂಬಂಧ ಕಡಬ ಠಾಣೆಯ ಕಾನ್ ಸ್ಟೇಬಲ್ ಯುವತಿಯ ಮನೆಗೆ ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಹೋಗುತ್ತಿದ್ದು, ಪ್ರಕರಣ ಮುಗಿದರೂ ಕೂಡ ಬೇರೆ ಬೇರೆ ನೆಪವೊಡ್ಡಿ ಆಕೆಯ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಯುವತಿಯ ದೈಹಿಕ ಬೆಳವಣಿಗೆಯಲ್ಲಿ ಏರುಪೇರಾಗಿ ಆಕೆ ಗರ್ಭಿಣಿ ಯಾಗಿರುವುದು ತಿಳಿದು ಬಂದಿದೆ. ಇದನ್ನು ತಿಳಿದ ಕಾನ್ಸ್ ಟೇಬಲ್, ಯುವತಿಯನ್ನು ಮಂಗಳೂರಿಗೆ ಕರೆದೊಯ್ದು ಗರ್ಭಪಾತ ಮಾಡಿಸಿ ಗೃಹಬಂಧನದಲ್ಲಿ ಇರಿಸಿದ್ದಾನೆಂದು ಯುವತಿ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದೀಗ ಪೊಲೀಸ್ ಸಿಬ್ಬಂದಿ ಶಿವರಾಜ್ ನನ್ನು ವಶಕ್ಕೆ ಪಡೆದಿರುವ ಕಡಬ ಪೊಲೀಸರು, ಆತನ ವಿರುದ್ಧ ಐಪಿಸಿ 506, ಪೋಕ್ಸೋ ಆ್ಯಕ್ಟ್ 2012 ಸೇರಿ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ, ಸಂತ್ರಸ್ತ ಯುವತಿ ಮತ್ತು ತಾಯಿ ಪತ್ತೆಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ ಅಂತ ತಿಳಿಸಿದ್ದಾರೆ.










