ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ – ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್…

61
firstsuddi

ಬೆಂಗಳೂರು : ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ನಗರದ ಪೀಣ್ಯಾದಲ್ಲಿ ವಿಧವೆ ಜಯಶ್ರೀ ಎಂಬುವರ ಮೇಲೆ 1998ರಲ್ಲಿ ಅತ್ಯಾಚಾರವೆಸಗಿ, ಕ್ರೂರವಾಗಿ ಹತ್ಯೆ ಮಾಡಿದ್ದ ಆರೋಪದಡಿ ನಗರದ ಸೆಷನ್ಸ್ ಕೋರ್ಟ್ 2006ರಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆ ತೀರ್ಪನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೆ ಉಮೇಶ್ ರೆಡ್ಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದನು. ಸುಪ್ರೀಂಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಆದೇಶ ಎತ್ತಿ ಹಿಡಿದಿತ್ತು. ಆ ಬಳಿಕ ಉಮೇಶ್ ರೆಡ್ಡಿ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದ. ಅರ್ಜಿ ಪರಿಶೀಲಿಸಿದ್ದ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು 2013ರಲ್ಲಿ ತಿರಸ್ಕರಿಸಿದ್ದರು. ನಂತರ ಸುಪ್ರೀಂಕೋರ್ಟ್ ಅರ್ಜಿಯನ್ನು ಹೈಕೋರ್ಟ್ ಗೆ ವರ್ಗಾಯಿಸಿತ್ತು.

ಕ್ಷಮಾಧಾನ ವಿಲೇವಾರಿಯಲ್ಲಿ ತಡವಾಗಿದ್ದ ಹಿನ್ನೆಲೆ ಹೈಕೋರ್ಟ್ ಮೊರೆ ಹೋಗಿದ್ದ ಉಮೇಶ್ ರೆಡ್ಡಿ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ವಿಳಂಬ ಮಾಡಿಲ್ಲ. ಹೀಗಾಗಿ ಮನವಿಯನ್ನು ಪರಿಗಣಿಸಲಾಗದು ಎಂದು ತಿಳಿಸಿ, ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.

ಸದ್ಯ ಈತ ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದು, ಕರ್ನಾಟಕ ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲಿ ಉಮೇಶ್ ರೆಡ್ಡಿ ಹೀನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.