ಅಮ್ಮನವರ ದರ್ಶನಕ್ಕೆ ಬಂದ ಸಾಧು ಮೇಲೆ ಅಮಾನವೀಯ ಹಲ್ಲೆ…

71
firstsuddi

ಕಲಬುರಗಿ : ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ತೆರಳಿದ ಸಾಧುವೊಬ್ಬರ ಮೇಲೆ ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಹೊರಹಾಕಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.

ಸೇಡಂ ತಾಲ್ಲೂಕಿನ ಯಾನಾಗುಂದಿ ಆಶ್ರಮದಲ್ಲಿದ್ದ ಸಾಧುವೊಬ್ಬರು ನಿನ್ನೆ ರಾತ್ರಿ ಅಮ್ಮನ ಮಂದಿರದಲ್ಲಿ ಧ್ಯಾನ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಆಶ್ರಮದವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದಾಗ ಆತನನ್ನು ಅಮಾನವೀಯವಾಗಿ ಎಳೆದೊಯ್ದು ಹೊರಹಾಕಲಾಗಿದೆ ಎನ್ನಲಾಗಿದೆ. ಅಲ್ಲದೇ, ಕೆಲವರು ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸಾಧುವನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಮಾತಾ ಮಾಣಿಕೇಶ್ವರಿ ಅಮ್ಮನವರು ಜೀವಂತವಾಗಿದ್ದಾಗಲೂ ಹಾಗೂ ಲಿಂಗೈಕ್ಯರಾದ ನಂತರವೂ ಅಮ್ಮನವರ ಗರ್ಭಗುಡಿ ದರ್ಶನಕ್ಕೆ ಅವಕಾಶ ಕಲ್ಪಿಸದ ಟ್ರಸ್ಟ್ ಸದಸ್ಯರ ನಡೆಗೆ ಭಕ್ತರು, ಜನರು ರೋಸಿ ಹೋಗಿದ್ದಾರೆ. ಇದೀಗ ಹಲವು ವರ್ಷಗಳಿಂದ ಸೇವೆ ಮಾಡಿಕೊಂಡಿದ್ದ ಸಾಧುವಿನ ಮೇಲೂ ಹಲ್ಲೆ ನಡೆಸಿದ್ದು, ಇವರ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.