ಮುಂಬೈ : ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್ಸಿಬಿ ಬಲೆಗೆ ಬಿದ್ದಿದ್ದ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಮುಂಬೈನ ಸೆಷನ್ಸ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಆರ್ಯನ್ ಜತೆಗೆ ಇತರ ಆರೋಪಿಗಳ ಜಾಮೀನು ಕೂಡ ತಿರಸ್ಕರಿಸಲಾಗಿದೆ. ಹೀಗಾಗಿ, ಈಗ ಆರ್ಯನ್ ಪರ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದು, ಇದರ ತೀರ್ಪು ಬರುವವರೆಗೆ ಮತ್ತಷ್ಟು ದಿನ ಆರ್ಯನ್ ಜೈಲಿನಲ್ಲೇ ಕಳೆಯಬೇಕಿದೆ.
ಅಕ್ಟೋಬರ್ 14 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ವಿ.ಪಾಟೀಲ್, ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿ ಅಕ್ಟೋಬರ್ 20ಕ್ಕೆ ವಿಚಾರಣೆಯನ್ನು ಮುಂದೂಡಿದ್ದರು. ಹಾಗಾಗಿ ಇಂದು ಆರ್ಯನ್ ಖಾನ್ ಗೆ ಜಾಮೀನು ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಆರ್ಯನ್ ಖಾನ್ ಪರ ವಾದ ಏನಿತ್ತು?
ಎನ್ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ದಾಳಿ ವೇಳೆ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ ಮತ್ತು ಅವರ ಬಳಿಕ ಹಣವೂ ಇರಲಿಲ್ಲ, ಹೀಗಾಗಿ ಡ್ರಗ್ ಸೇವನೆ, ಮಾರಾಟ, ಖರೀದಿ ಆರೋಪಗಳೇಲ್ಲ ಸುಳ್ಳು ಎಂದು ವಾದಿಸಿದ್ದಾರೆ.
ಎನ್ಸಿಬಿ ಪರ ವಾದ ಏನಿತ್ತು?
ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕರಣ ಮೂರು ವರ್ಷದಿಂದ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಅನೀಲ್ ಸಿಂಗ್ ಆರೋಪಿಸಿದ್ದಾರೆ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಅನಿಲ್ ಸಿಂಗ್ ಕೋರ್ಟ್ ಗೆ ಮನವಿ ಮಾಡಿದ್ದರು.










