ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಕಾಫಿನಾಡ ಯುವಕನೇ ಸಾರಥಿ – ಈತನ ಸಾಧನೆಗೆ ಮೋದಿ ಪ್ರಶಂಸೆ…

93
firstsuddi

ಚಿಕ್ಕಮಗಳೂರು : ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೊಳ್ಳಲಿದ್ದು, ಅದರ ಸಾರಥಿ 23ರ ಹರೆಯದ ಅವೇಜ್ ಅಹಮದ್ ಆಗಲಿದ್ದಾರೆ.

ಖಾಸಗಿ ಉಪಗ್ರಹ ಉಡಾವಣೆ ಸಂಬಂಧ ಈಗಾಗಲೇ ಯುವಕನ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮುಂಬರೋ ಡಿಸೆಂಬರ್ ಒಳಗೆ ಉಪಗ್ರಹ ಉಡಾವಣೆಗೊಳ್ಳಲಿದ್ದು, ಇಸ್ರೋ ದಿನಾಂಕ ನಿಗದಿ ಮಾಡಬೇಕಿದೆ. ಆರಂಭದಲ್ಲಿ ಈ ಉಪಗ್ರಹ ರಷ್ಯಾದಿಂದ ಉಡಾವಣೆಗೊಳ್ಳಬೇಕಿತ್ತು. ಈ ವಿಚಾರ ಕೇಂದ್ರ ಸರ್ಕಾರಕ್ಕೆ ಗೊತ್ತಾಗಿ ಕೇಂದ್ರ ಸರ್ಕಾರವೇ ಮುಂದೆ ನಿಂತು ಇಂದು ಉಪಗ್ರಹ ಉಡಾವಣೆಗೆ ಸಾಥ್ ಕೊಟ್ಟಿದೆ. ಹೀಗಾಗಿ ಈ ಉಪಗ್ರಹ ಭಾರತದ ಮಣ್ಣಲ್ಲೇ ಉಡಾವಣೆಗೊಳ್ಳಲಿದೆ.

23 ವರ್ಷದ ಅವೇಜ್ ಅಹಮದ್ ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ ನದೀಮ್ ಅಹಮದ್. ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ಅವೇಜ್ ಅಹಮದ್ ನಾಸದಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಬಂದಿದ್ದರು. ಬೆಂಗಳೂರಿನಲ್ಲಿ ಪಿಕ್ಸೆಲ್ ಕಂಪನಿ ತೆರೆದು ಓದುವಾಗಲೇ ಏರ್ ಸ್ಪೇಸ್ನತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಅದರ ಪರಿಣಾಮ ಇಂದು ದೇಶದ ಮೊದಲ ಖಾಸಗಿ ಉಪಗ್ರಹಕ್ಕೆ ಕಾಫಿನಾಡ ಹುಡುಗ ಸಾರಥಿಯಾಗಲಿದ್ದಾರೆ. ಮುಂದಿನ 2-3 ವರ್ಷದಲ್ಲಿ ಸುಮಾರು 36 ಖಾಸಗಿ ಉಪಗ್ರಹಗಳು ಉಡಾವಣೆಗೊಳ್ಳಲಿವೆ.

ಈ ಉಪಗ್ರಹದ ಕುರಿತು 2020ರ ಡಿಸೆಂಬರ್ 14 ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಹಾಗೂ ಖಾಸಗಿ ಕಂಪೆನಿಗಳ ಸಿಇಓಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಆಗ ಅವೇಜ್ ಅಹಮದ್ ಕೂಡ ಮೋದಿ ಜೊತೆ ಮಾತನಾಡಿದ್ದರು. ಅವೇಜ್ ಅಹಮದ್ ರವರ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ ಶೇಕಡ 50ಕ್ಕಿಂತ ಹೆಚ್ಚು ಡೇಟಾವನ್ನ ಬಿಡುಗಡೆಗೊಳಿಸುತ್ತೆ. ಅವೇಜ್ ತಯಾರಿಸಿರೋ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ.

ಅವೇಜ್ ತಂದೆ ನದೀಮ್ ಕೂಡ ಮಗನ ಸಾಧನೆಯನ್ನು ಕೊಂಡಾಡಿದ್ದಾರೆ. ಎಲ್ಲಾ ಮಕ್ಕಳು ಇದೇ ರೀತಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಎಲ್ಲಾ ಮಕ್ಕಳು ದೇಶದ ಪ್ರಗತಿ ಸಾಧನೆ ಮಾಡಬೇಕು ಎಂದು ಬಯಸಿದ್ದಾರೆ.