ಬೆಂಗಳೂರು : ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಹೊಸ ವಾಹನಗಳ ಡೀಲರ್ ಮಟ್ಟದ ನೋಂದಣಿ ಗೆ ಅವಕಾಶ ಕಲ್ಪಿಸಿ 2021ರ ಅಕ್ಟೋಬರ್ 31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಕೋರಿ ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಮೊಹಮ್ಮದ್ ದಸ್ತಗೀರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ಅವರು ಹೊಸ ವಾಹನಗಳ ನೋಂದಣಿ ಮಾಡುವ ಜವಾಬ್ದಾರಿಯನ್ನು ವಾಹನ ಮಾರಾಟಗಾರರಿಗೇ ವಹಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದು ಮೊಟಾರು ವಾಹನ ಕಾಯಿದೆಗೆ ವಿರುದ್ಧವಾಗಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಸಾರಿಗೆ ಇಲಾಖೆಯ ಈ ಕ್ರಮ ಟ್ರಾವೆಲ್ ಏಜೆನ್ಸಿಗಳಿಗೆ ಪಾಸ್ಪೋರ್ಟ್ ಹಾಗೂ ವೀಸಾ ವಿತರಿಸುವ ಹಕ್ಕು ನೀಡಿದಷ್ಟೇ ಅಪಾಯಕಾರಿಯಾಗಿದೆ. ಯಾರು ಯಾರಿಗೆ ಬೇಕಾದರೂ ವಾಹನ ನೋಂದಣಿ ಮಾಡಿಕೊಡುವ ಸಾಧ್ಯತೆ ಇದೆ. ಆದ್ದರಿಂದ ಅಧಿಸೂಚನೆ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ಪೀಠವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಾರಿಗೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಸರ್ಕಾರ ಆಕ್ಷೇಪಣೆ ಸಲ್ಲಿಸಲಿ. ಆದರೆ, ಅಷ್ಟರೊಳಗೆ ಸಾಕಷ್ಟು ವಾಹನಗಳನ್ನು ಖಾಸಗಿ ಡೀಲರ್ಗಳು ನೋಂದಣಿ ಮಾಡಿಕೊಡುವ ಸಾಧ್ಯತೆ ಇದೆ. ಆದ್ದರಿಂದ, ವಾಹನಗಳ ನೋಂದಣಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡುವುದಾಗಿ ಸ್ಪಷ್ಟಪಡಿಸಿ ಮಧ್ಯಂತರ ಆದೇಶ ನೀಡಬೇಕು ಎಂದರು. ವಾದ ಆಲಿಸಿದ ಪೀಠ, ವಾಹನಗಳ ನೋಂದಣಿಯಾಗಿದ್ದರೆ, ಅವು ಈ ಅರ್ಜಿ ಕುರಿತ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆ ಮುಂದೂಡಿತು.










