ಬೆಂಗಳೂರು : ಮಹಿಳೆಯರಿಗಾಗಿ ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿಯಲ್ಲಿ ಪ್ರತ್ಯೇಕ ಮಹಿಳಾ ಉದ್ಯಮ ಪಾರ್ಕ್ ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.
ಉಬುಂಟು ಒಕ್ಕೂಟ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವತಿಯಿಂದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ‘ಒಟ್ಟಾಗಿ ಬೆಳೆಯೋಣ ಮತ್ತು ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಬಂಟು, ಇದೊಂದು ಮಹಿಳಾ ವಾಣಿಜ್ಯೋದಮ ಒಕ್ಕೂಟಗಳ ಸಂಘಟನೆಯಾಗಿದೆ. ಇದರಡಿ ಸುಮಾರು 30 ಮಹಿಳಾ ಉದ್ಯಮಿಗಳ ಸಂಘಟನೆಗಳು ಹಾಗೂ 1500 ಸದಸ್ಯರ ಒಂದೇ ವೇದಿಕೆಯಡಿ ಕೆಲಸ ಮಾಡುತ್ತಾರೆ. ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್ ಸ್ಥಾಪಿಸುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದರ ಸದುಪಯೋಗವನ್ನು ಪಡೆದುಕೊಂಡರೆ ಇದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮಹಿಳೆಯರು ಸ್ವಯಂ ಉದ್ಯಮಿಗಳಾಗಿ ಇನ್ನೊಬ್ಬರಿಗೆ, ಉದ್ಯೋಗ ನೀಡುವ ಹಂತಕ್ಕೆ ಬೆಳೆಯುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ನೀವು ಉದ್ಯೋಗ ಪಡೆದರಷ್ಟೇ ಸಾಲದು. ಉದ್ಯಮಿಯಾಗುವುದರ ಜೊತೆಗೆ ನೂರಾರು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆದಾಗ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಸಂಘ ತೆರೆಯಲಾಗುವುದು. ದೃಷ್ಟಿ ಚೇತನ ಮತ್ತು ವಿಶೇಷಚೇತನ ಮಹಿಳೆಯರಿಗೆ ಉದ್ಯೋಗ ಕೊಡಲು ವಿಶೇಷ ಯೋಜನೆ ರೂಪಿಸುವುದಾಗಿ ಘೋಷಣೆ ಮಾಡಿದರು.
ಪ್ರಮುಖ ವಾಣಿಜ್ಯ ಚಟುವಟಿಕೆಗಳಲ್ಲಿ ಮಹಿಳೆಯರು ಕೆಲಸ ಮಾಡಬೇಕು. ಇದಕ್ಕೆ ಬೇಕಾದ ಹಣಕಾಸಿನ ಸಹಾಯ, ಮಾರುಕಟ್ಟೆ ಒದಗಿಸಲು ಸರ್ಕಾರ ನೆರವು ನೀಡಲಿದೆ. ಮಹಿಳಾ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ಕೊಡಲಿದೆ. ಮಹಿಳಾ ಉದ್ಯಮಿಗಳಿಗೆ ಜಾಗ ಕೊಳ್ಳಲು ಸರ್ಕಾರ ನೆರವು ನೀಡಲು ಚಿಂತಿಸುತ್ತಿದೆ. ಮಹಿಳೆಯರು ಉದ್ದಿಮೆದಾರರಾಗಬೇಕು, ಅದಕ್ಕಾಗಿಯೇ ಸರ್ಕಾರ ವುಮೆನ್ ಎಂಟರ್ ಪ್ರೆನ್ಯೂರ್ ಶಿಪ್ ಎಂದು ಮಾಡಿದೆ ಎಂದರು.










