ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದ್ದು, ಈ ಹಿನ್ನಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಮುರುಡೇಶ್ವರದಲ್ಲಿ ಭದ್ರತೆಯನ್ನ ಹೆಚ್ಚಿಸಿದೆ.
ಕಳೆದೆರಡು ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಬೃಹತ್ ಶಿವನ ಪ್ರತಿಮೆ ವಿರೂಪಗೊಳಿಸಿ ಚಿತ್ರವನ್ನ ಐಸಿಸ್ ತನ್ನ ಮ್ಯಾಗಜೀನ್ ನಲ್ಲಿ ಹಾಕಿಕೊಂಡಿತ್ತು. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ಜಿಲ್ಲಾ ಪೊಲೀಸ್ ಇಲಾಖೆ ಮುರುಡೇಶ್ವರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಿದ್ದು, ದೇವಸ್ಥಾನದ ಸುತ್ತ ಹದ್ದಿನ ಕಣ್ಣಿರಿಸಿದೆ. ಸಿ ಸಿಕ್ಯಾಮೆರಾ ಕಣ್ಗಾವಲು, ಸಶಸ್ತ್ರಪಡೆ ನಿಯೋಜನೆ ಜತೆಗೆ ದೇವಸ್ಥಾನಕ್ಕೆ ಆಗಮಿಸುವವರನ್ನ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ.
ಶಿವನ ವಿಗ್ರಹ ವಿರೂಪಗೊಳಿಸಿ ಪ್ರಕಟಿಸಿದ್ದಕ್ಕೆ ಮುರುಡೇಶ್ವರದಲ್ಲಿ ಐಸಿಸ್ ಪ್ರತಿಕೃತಿ ದಹನ ಮಾಡಿ ಬಿಜೆಪಿ ಯುವಮೋರ್ಚಾದಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೇ, ಮುರುಡೇಶ್ವರದ ಮೇಲೆ ಉಗ್ರರ ಕಣ್ಣು ಬಿದ್ದಿರುವುದು ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಆತಂಕ ವ್ಯಕ್ತವಾದ ಬೆನ್ನಲ್ಲೇ ಬಿಗಿ ಭದ್ರತೆ ಒದಗಿಸಲಾಗಿದೆ.










