ದಾವಣಗೆರೆ : ಸಿದ್ದರಾಮಯ್ಯನವರ ಸೊಕ್ಕಿನ, ಧಿಮಾಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ನಡೆದ ಪರಿಷತ್ ಚುನಾವಣೆಯ ಪ್ರಚಾರ ಸಭೆಗೆ ಹಾಜರಾಗುವ ಮುನ್ನ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ವಿಪಕ್ಷದ ನಾಯಕರೆಂಬುದನ್ನು ಮರೆತು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ. ಮತದಾರರು ಇದೀಗ ಜಾಗೃತರಾಗಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಮತ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ ಇಷ್ಟೊಂದು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುವಂತಹದ್ದಲ್ಲ. ಇಷ್ಟಾದರೂ ಬುದ್ಧಿ ಕಲಿಯದ ಸಿದ್ದರಾಮಯ್ಯ ಇನ್ನಾದರು ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕಾಗಿದೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಿ ನಿಮ್ಮ ಅಭ್ಯರ್ಥಿಗಳಿಲ್ಲ ಅಲ್ಲಲ್ಲಿ ಬೆಂಬಲಿಸುವಂತೆ, ಸಹಕರಿಸುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದೇನೆ. ಅವರು ನೂರಕ್ಕೆ ನೂರು ನಮಗೆ ಸಹಕಾರ ಕೊಡುತ್ತಾರೆಂಬ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಚ್ ಡಿ ದೇವೆಗೌಡ್ರು ಭೇಟಿ ಮಾಡಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ. ಎಂದು ಸ್ಪಷ್ಟಪಡಿಸಿದರು.
ಸಂಪುಟ ಪುನಃ ರಚನೆ ಮಾಡುವುದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ. ಯಾರನ್ನು ಮಂತ್ರಿ ಮಾಡಬೇಕೆಂಬುದು ಸಿಎಂಗೆ ಬಿಟ್ಟ ವಿಚಾರ. ಅವರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದರು.










