ಚಿಕ್ಕಮಗಳೂರು : ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವೈಭವದಿಂದ ಜರುಗಿದ ಕಾರ್ತೀಕ ದೀಪೋತ್ಸವ…

112
firstsuddi

ಚಿಕ್ಕಮಗಳೂರು : ನಗರದ ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಕಾರ್ತೀಕ ದೀಪೋತ್ಸವ ನೂರಾರು ಭಕ್ತರ ನಡುವೆ ನಿನ್ನೆ ವೈಭವದಿಂದ ಜರುಗಿತು.

ದೀಪೋತ್ಸವದ ಪ್ರಯುಕ್ತ ಬೆಳಿಗ್ಗೆ ದೇವಾಲಯದಲ್ಲಿ ಅಧಿದೇವತೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆಯಿತು. ಸಂಜೆಯಾಗುತ್ತಿದ್ದಂತೆ ದೇವಾಲಯಕ್ಕೆ ಆಗಮಿಸಿದ ನೂರಾರು ಭಕ್ತರು ದೇವಾಲಯದ ಆವರಣದಲ್ಲಿ ಸಾಮೂಹಿಕವಾಗಿ ಸಹಸ್ರಾರು ದೀಪದ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು.

ರಾತ್ರಿ 8 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಪ್ರಧಾನ ಅರ್ಚಕ ಡಿ.ಆರ್.ಕುಮಾರಸ್ವಾಮಿ ಅವರು ವೇದಘೋಷದ ನಡುವೆ ದೇವಾಲಯದ ಮುಂಭಾಗದಲ್ಲಿ ಕಾರ್ತಿಯನ್ನು ಬೆಳಗಿಸಿದರು. ನಂತರ ದೇವಾಲಯದ ಅಧಿದೇವತೆಗಳಿಗೆ ರಕ್ಷಾಧಾರಣೆ ಮಾಡಲಾಯಿತು.
ತಹಶೀಲ್ದಾರ್ ಡಾ|| ಕೆ.ಜೆ.ಕಾಂತರಾಜ್, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ.ಗಿರಿಜಾಶಂಕರ್, ಸದಸ್ಯರಾದ ಕವಿತಾ ಗೋಪಾಲ್, ಪುಷ್ಪಾರಾಜೇಂದ್ರ, ಕೆ.ಎಸ್.ನಂಜುಂಡರಾವ್, ಡಿ.ಎನ್.ಮೋಹನ್, ಬಸವರಾಜ್, ಉಮೇಶ್, ಮಂಜುನಾಥ್, ಕಂದಾಯ ನಿರೀಕ್ಷ ಸತ್ಯನಾರಾಯಣ ಹಾಜರಿದ್ದರು.

ಕಾರ್ತೀಕ ಮಾಸದ ಕೊನೆಯ ದಿನವಾದ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೆಳಗಿನಿಂದ ರಾತ್ರಿಯವರೆಗೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.