ನೈಟ್ ಕರ್ಫ್ಯೂಗೆ ಜನ ಸಹಕಾರ ನೀಡಬೇಕು : ಸಿಎಂ ಬೊಮ್ಮಾಯಿ.

83
firstsuddi

ಬೆಂಗಳೂರು : ಕೊರೊನಾ ಎರಡನೇ ಅಲೆಯಿಂದ ರಾಜ್ಯದ ಜನತೆ ಸುಧಾರಿಸಿಕೊಳ್ಳುತ್ತಿರುವಾಗಲೇ ಇದೀಗ ಮತ್ತೊಮ್ಮೆ ನೈಟ್ ಕರ್ಫ್ಯೂ ವಿಧಿಸಿರುವುದು ಆತಂಕ ಸೃಷ್ಟಿಸಿದೆ. ಈ ನೈಟ್ ಕರ್ಫ್ಯೂಗೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಈ ಕುರಿತಂತೆ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾತ್ರಿ ಕರ್ಫ್ಯೂಗೆ ವಿರೋಧ ವ್ಯಕ್ತವಾಗುತ್ತಿದೆ, ಆದರೆ ಜನರ ಆರೋಗ್ಯ ದೃಷ್ಟಿಯಿಂದ ಇದನ್ನು ಜಾರಿ ಮಾಡಲಾಗಿದೆ. ನಮಗೂ ಆರ್ಥಿಕ ಚಟುವಟಿಕೆಗಳು ನಡೆಯಲಿ ಅನ್ನೋದಿದೆ, ಆದರೆ ಕೋವಿಡ್ ಕಾರಣದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಜನ ಸಹಕಾರ ನೀಡಬೇಕು ಎಂದು ಸಿಎಂ ಮನವಿ ಮಾಡಿದರು.

ಹೊಸ ವರ್ಷ ಸಂಭ್ರಮಾಚರಣೆಗೆ ಜನರು ಎಲ್ಲಾದರೂ ಹೋಗಲಿ, ಆದರೆ ಕೋವಿಡ್ ನಿಯಮಗಳನ್ನು ಅನುಸರಿಸಲಿ. ಅವರಿಗೆ ಎಲ್ಲಿಗೆ ಬೇಕಾದರೂ ಹೋಗಲು ಸ್ವಾತಂತ್ರ್ಯ ಇದೆ, ಆದರೆ ಕೋವಿಡ್ ನಿಯಮ ಪಾಲಿಸಿ ಸಂಭ್ರಮಾಚರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಪಕ್ಷದಲ್ಲಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಇದೆ. ಈ ಯೋಜನೆ ಜಾರಿ ವಿಳಂಬ ಆಗಿಲ್ಲ. ಕೋವಿಡ್ ಮೃತರ ಕುರಿತು ದಾಖಲೆಗಳ ಸಂಗ್ರಹ ನಡೆಯುತ್ತಿತ್ತು. ಎರಡು ತಿಂಗಳು ನೀತಿ ಸಂಹಿತೆ ಇತ್ತು, ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಆದರೆ ಈಗಾಗಲೇ ಎಲ್ಲ ಕಡೆ ಜಿಲ್ಲಾಧಿಕಾರಿಗಳು ಪರಿಹಾರ ಕೊಡುತ್ತಿದ್ದಾರೆ ಎಂದರು.