ಬೆಂಗಳೂರು : ಪಾದಯಾತ್ರೆ ಮಾಡಲು ನಮ್ಮ ವಿರೋಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೆ ಹೋರಾಟ ಮಾಡುವ ಹಕ್ಕಿದೆ. ಸಮಯ ಸಂದರ್ಭ ನೋಡ್ಕೊಂಡು ಹೋರಾಟ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಬರುವ ಸಮಯದಲ್ಲಿ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟು ಸರಿ?. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ. ಈಗ ಅಧಿಕಾರದಲ್ಲಿಲ್ಲ, ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಚುನಾವಣೆ ಟೈಮ್ ನಲ್ಲಿ ವೋಟ್ ಬ್ಯಾಂಕ್ ಆಗುತ್ತದೆಯೇ ಹೊರತು ಜನಪರ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಮತ್ತು ಮುಖ್ಯಮಂತ್ರಿಗಳು ಲೀಗಲ್ ಟೀಂ ಜೊತೆ ಸಂಪರ್ಕದಲ್ಲಿದ್ದು, ಕಾನೂನು ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಜಲಶಕ್ತಿ ಮಂತ್ರಿ ಜೊತೆ ಚರ್ಚೆ ಮಾಡಿ ಕ್ಲಿಯರ್ ಮಾಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಪರಿಸರ ಇಲಾಖೆ ಕ್ಲಿಯರೆನ್ಸ್ಗೂ ಸಹ ಪ್ರಯತ್ನ ಪಡುತ್ತಿದ್ದೇವೆ. ತಮಿಳುನಾಡು ಸರ್ಕಾರ ಸಹ ಸುಪ್ರೀಂ ಕೋರ್ಟ್ ಗೆ ಹೋಗಿದೆ. ನಾವು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ಎದರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವೀಕೆಂಡ್ ಕರ್ಪ್ಯೂಗೆ ಸಾರ್ವಜನಿಕರ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ವಿಶ್ವದಲ್ಲಿ ಕೋವಿಡ್ನಿಂದ ಸಾವು-ನೋವು ಸಂಭವಿಸಿವೆ. ರಾಜ್ಯದಲ್ಲೂ ಸಮಸ್ಯೆ ಆಗಿತ್ತು. ಮತ್ತೆ ಆ ಸಮಸ್ಯೆ ಆಗಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಏನು ಕ್ರಮ ತಗೆದುಕೊಳ್ಳಬೇಕೋ ಅದನ್ನ ನಾವು ತೆಗೆದುಕೊಂಡಿದ್ದೇವೆ. ಜನರು ಸಹಕರಿಸಬೇಕಿದೆ ಎಂದರು.










