ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಅವರು ವಿಧಿವಶ…

71
firstsuddi

ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ, ಪ್ರೊ. ಚಂದ್ರಶೇಖರ ಪಾಟೀಲ್ ಅವರು (83) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ 6.30ರ ಸುಮಾರಿಗೆ ಕೋಣನಕುಂಟೆ ಕ್ರಾಸ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದ ಮೂಲಕ ಗುರತಿಸಿಕೊಂಡಿದ್ದ `ಚಂಪಾ’ ನಾಮದಿಂದ ಪ್ರಖ್ಯಾತರಾದ ಚಂದ್ರಶೇಖರ್ ಪಾಟೀಲ್ ಅವರು 1939ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. 1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1996ರಲ್ಲಿ ಪ್ರೊಫೆಸರ್ ಮತ್ತು ಚೇರ್ಮನ್ರಾಗಿ ಕರ್ತವ್ಯ ನಿರ್ವಹಿಸಿದ್ದರು. ನವೆಂಬರ್ 2004 ರಿಂದ 2008ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಚಂಪಾ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ನಷ್ಟವಾಗಿದೆ. ಈ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬದವರು, ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆ. ಕನ್ನಡಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದ್ರು. ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ ಪ್ರೊ.ಚಂಪಾ ಅವರ ನಿಧನದ ವಿಷಯದಿಂದ ತುಂಬಾ ದುಃಖಿತನಾಗಿದ್ದೇನೆ ಎಂದು ಸಾಹಿತಿ ಚಂಪಾ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಅನ್ಯಾಯ, ಅಸಮಾನತೆ, ಸರ್ವಾಧಿಕಾರದ ವಿರುದ್ಧ ಸಿಡಿಯುತ್ತಲೇ ಇದ್ದ ಹುಟ್ಟು ಬಂಡಾಯಗಾರ, ವೈಚಾರಿಕ ಗುರು, ನನ್ನ ದೀರ್ಘ ಕಾಲದ ಸ್ನೇಹಿತರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ್ ನಿಧನದಿಂದ ದುಃಖಿತನಾಗಿದ್ದೇನೆ. ಇವರ ಕುಟುಂಬ ಹಾಗೂ ಅಭಿಮಾನಿಗಳ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಚಂಪಾ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.